ಮಡಿಕೇರಿ:ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಸುಮಾರು 700 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ತಿಳಿಸಿದ್ದಾರೆ.
ಎಡೆಬಿಡದೆ ಸುರಿದ ಮಳೆ ಹಾಗೂ ಗುಡ್ಡ ಕುಸಿತದಿಂದಾಗಿ 150 ಮನೆಗಳು ನೆಲಸಮವಾಗಿದೆ. ಹಲವು ಮನೆಗಳು ಭಾಗಶಃ ಕುಸಿದು ಹೋಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಪರಿಹಾರ ಕೇಂದ್ರಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದಾರೆ ಎಂದರು.
ಮಳೆಯಿಂದಾಗಿ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ ಸಂಭವ ಇರುವುರಿಂದ ಗುಡ್ಡಗಾಡು ಪ್ರದೇಶ ಮತ್ತು ಬೆಟ್ಟದ ತಪ್ಪಲುಗಳಲ್ಲಿ ವಾಸ ಮಾಡುವ ಜನರು ಸುರಕ್ಷತೆಯಿಂದ ಇರಲು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು.
ಕಳೆದ ವಾರ ವರುಣನ ಆರ್ಭಟದಿಂದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ 800ಕ್ಕೂ ಅಧಿಕ ಜನರನ್ನು, 20ಕ್ಕೂ ಹೆಚ್ಚು ಜಾನುವಾರುಗಳನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ರಕ್ಷಿಸಿದ್ದರು. ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 14ರಿಂದ 16ರವರೆಗೆ ಆರೆಂಜ್ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿತ್ತು.