ಗದಗ: ಜಿಲ್ಲೆಯಲ್ಲಿ ದಿನಕಳೆದಂತೆ ಕೊರೊನಾ ಸೊಂಕಿತರ ಸಂಖ್ಯೆ ಇಳಿಮುಖವಾಗಿದ್ದರೂ, ಎರಡನೇ ಅಲೆ ತೀವ್ರವಾಗಿ ಭಾದಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2ನೇ ಅಲೆಯಲ್ಲಿ ಸೋಂಕಿನ ತೀವ್ರತೆ ಮತ್ತು ಮೃತರ ಸಂಖ್ಯೆಯೂ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ.
ಕಳೆದ ವರ್ಷ ಅಕ್ಟೋಬರ್ ನಿಂದ 2021ರ ಏಪ್ರಿಲ್‌ವರೆಗೆ ತಿಂಗಳಿಗೆ ಬೆರಳೆಣಿಕೆಯಷ್ಟು ಸೋಂಕು ಕಂಡು ಬರುತ್ತಿತ್ತು. ಆದರೆ ಕೋವಿಡ್ ಸೋಂಕಿನಿಂದ ಯಾರೊಬ್ಬರೂ ಮೃತಪಟ್ಟಿರಲಿಲ್ಲ. ಆದರೆ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಏಪ್ರಿಲ್ ನಿಂದ ಗಗನಮುಖೀಯಾಗಿದೆ. 2020ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 6778 ಪುರುಷ ಮತ್ತು 4129 ಮಹಿಳೆಯರು ಸೇರಿದಂತೆ ಒಟ್ಟು 10907 ಜನರು ಸೋಂಕಿಗೆ ಒಳಗಾಗಿದ್ದರು. ಆದರೆ 2ನೇ ಅಲೆಯಲ್ಲಿ 12419 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಬಾರಿ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ.
ಜಿಲ್ಲೆಯ ಒಟ್ಟು ಸೋಂಕಿತರಲ್ಲಿ ಶೇ. 55ರಷ್ಟು ಜನರು ಗ್ರಾಮೀಣ ಭಾಗಕ್ಕೆ ಸೇರಿದವರು ಎನ್ನಲಾಗಿದೆ. ಮೃತರಲ್ಲಿ ಮಹಿಳೆಯರೇ ಹೆಚ್ಚು: ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಈ ಬಾರಿ ಮೃತರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. 2020ರಲ್ಲಿ ಆರಂಭಗೊಂಡ ಮೊದಲ ಅಲೆಯಲ್ಲಿ ಒಟ್ಟು 141 ಜನರು ಕೊನೆಯುಸಿರೆಳೆದಿದ್ದಾರೆ. ಅದರಲ್ಲಿ ಶೇ.77 ಪುರುಷ, ಶೇ.23 ಮಹಿಳೆಯರು ಮೃತಪಟ್ಟಿದ್ದರು. ಕೊರೊನಾ 2ನೇ ಅಲೆಯಲ್ಲಿ ಏಪ್ರಿಲ್-ಮೇ ಈ ಎರಡು ತಿಂಗಳಲ್ಲಿ ಒಟ್ಟು 105 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಶೇ.54 ಮಹಿಳೆಯರೇ ಮಹಾಮಾರಿಗೆ ಬಲಿಯಾಗಿದ್ದಾರೆ.
ಸೋಂಕಿನ ನಿರ್ಲಕ್ಷ್ಯದಿಂದ ಸಾವು: ಮೊದಲ ಅಲೆಯಲ್ಲಿ ಜನರಲ್ಲಿ ಸಾಮಾನ್ಯವಾಗಿ ಕೆಮ್ಮು, ನೆಗಡಿಯಂತಹ ಕೋವಿಡ್ ಲಕ್ಷಣಗಳು ಕಂಡು ಬರುತ್ತಿದ್ದವು. ಆದರೆ 2ನೇ ಅಲೆಯಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ದರೂ ಸೋಂಕು ಖಚಿತವಾಗುತ್ತಿದೆ.
ಇನ್ನೂ ಕೆಲವರಿಗೆ ರೋಗ ಲಕ್ಷಣಗಳಿದ್ದರೂ, ಆರ್‌ಟಿಪಿಸಿಆರ್‌ನಲ್ಲಿ ವರದಿ ನೆಗೆಟಿವ್ ಆಗಿರುತ್ತದೆ. ಈ ಹಂತದಲ್ಲಿ ಅನೇಕರು ನಿರ್ಲಕ್ಷ್ಯ ತೋರುವುದರಿಂದ ಆಪತ್ತಿಗೊಳಗಾಗುತ್ತಿದ್ದಾರೆ. ಆನಂತರ ಸೋಂಕಿನ ಲಕ್ಷಣಗಳು ತೀವ್ರಗೊಂಡಾಗ ನಡೆಸುವ ಸಿಟಿ ಸ್ಕ್ಯಾನ್‌ನಲ್ಲಿ ಕೋವಿಡ್ ಕಂಡು ಬರುತ್ತಿದೆ. ಈ ಹಂತದಲ್ಲಿ ತಕ್ಷಣಕ್ಕೆ ಅಗತ್ಯ ಚಿಕಿತ್ಸೆ ದೊರೆಯದಿರುವುದು, ಚಿಕಿತ್ಸೆಗೆ ರೋಗಿ ಸ್ಪಂದಿಸದೇ ಸಾಯುತ್ತಿದ್ದಾರೆ.
ಇನ್ನು ಸಕ್ಕರೆ ಕಾಯಿಲೆಯಂತಹ ಗಂಭೀರ ಕಾಯಿಲೆ, ನಿಮೋನಿಯಾ ಹಾಗೂ ಹೃದಯ ಸಂಬಂ ಧಿತ ಕಾರಣಗಳಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಜಿಮ್ಸ್ ಆಸ್ಪತ್ರೆ ವೈದ್ಯರು. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದರೂ ಸಾವಿನ ಸರಣಿ ನಿಲ್ಲುತ್ತಿಲ್ಲ. ಪ್ರತಿನಿತ್ಯ ನಾಲ್ಕ್ಐದು ಜನರು ಕೊನೆಯುಸಿರೆಳೆಯುತ್ತಿರುವುದು ಸಾರ್ವಜನಿಕರಲ್ಲಿ ಆಂತಕ ಹೆಚ್ಚಿಸಿದೆ.