Advertisement

400 ಹಾಸಿಗೆ ಆಸ್ಪತ್ರೆಗೆ 150 ಕೋಟಿ ಬಿಡುಗಡೆ

12:41 PM Sep 29, 2019 | Team Udayavani |

ಕಾರವಾರ: ಕಾರವಾರ ಮೆಡಿಕಲ್‌ ಕಾಲೇಜಿಗೆ ಅಗತ್ಯ ಇರುವ 400 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಶಾಸಕಿ ರೂಪಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶುಕ್ರವಾರ ರಾತ್ರಿ ಭೇಟಿ ಮಾಡಿ ವಿನಂತಿಸಿದರು.

Advertisement

ಈ ಸಂಬಂಧ ಲಿಖೀತ ಮನವಿ ಸಲ್ಲಿಸಿದ ಅವರು, ಹಿಂದಿನ 2019-20ರ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ನೂತನ ಆಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ಬಿಡುಗಡೆಗೆ ವಿನಂತಿಸಿದರು.

ತಕ್ಷಣ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಆಸ್ಪತ್ರೆ ನಿರ್ಮಾಣಕ್ಕೆ ತಕ್ಷಣ ಹಣ ಬಿಡುಗಡೆಗೆ ಆದೇಶಿಸಿದ್ದಾರೆ. ಸಂಬಂಧಿತ ಅಧಿಕಾರಿಗಳು ಹಣ ಬಿಡುಗಡೆಯ ಮುಂದಿನ ಕ್ರಮಕ್ಕೆ ಸೂಚಿಸಿದರು.

ಕಿಮ್ಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಸ್ಪತ್ರೆ ಕಟ್ಟಡದ ಡಿಪಿಆರ್‌ ಹಾಗೂ ವಿವರವಾದ ಎಸ್ಟಿಮೇಶನ್‌ ಸಹ ಸಲ್ಲಿಸಲು ಸೂಚಿಸಿದರು. ನೂತನ ಆಸ್ಪತ್ರೆ ನಿರ್ಮಾಣದ ಅವಶ್ಯಕತೆಯನ್ನು ಸಹ ಸಿಎಂಗೆ ಮನವರಿಕೆ ಮಾಡಿಕೊಡಲಾಗಿದೆ. ಎಂಸಿಐ ಅನುಮತಿ ಕಿಮ್ಸ್‌ಗೆ ಮುಂದುವರಿಯುವ ನಿಟ್ಟಿನಲ್ಲಿ ನೂತನ ಆಸ್ಪತ್ರೆ ಅವಶ್ಯಕತೆಯನ್ನು ವಿವರಿಸಿದರು. ಅಲ್ಲದೇ ಕಾರವಾರದ ಇತರ ಬೇಡಿಕೆಗಳನ್ನು ಸಹ ಮಂಡಿಸಿದರು.

ಪ್ಯಾರಾ ಮೆಡಿಕಲ್‌ ನರ್ಸಿಂಗ್‌ ಹುದ್ದೆ ಮಂಜೂರಿಗೆ ಮನವಿ: ಕಿಮ್ಸ್‌ ಆಸ್ಪತ್ರೆಗೆ ಅನುಕೂಲವಾಗುವಂತೆ ಪ್ಯಾರಾ ಮೆಡಿಕಲ್‌ ಹುದ್ದೆಗಳ ಹಾಗೂ ನರ್ಸಿಂಗ್‌ ಹುದ್ದೆಗಳ ಮಂಜೂರಾತಿಗೆ ಮುಖ್ಯಮಂತ್ರಿಗಳಲ್ಲಿ ಶಾಸಕಿ ರೂಪಾಲಿ ವಿನಂತಿಸಿದರು. 2022ರ ಎಂಸಿಐ ಭೇಟಿ ವೇಳೆಗೆ ಸಿ ದರ್ಜೆ ಹುದ್ದೆಗಳ ಹಾಗೂ ನರ್ಸಿಂಗ್‌ ಹುದ್ದೆಗಳ ಮಂಜೂರಾತಿ ಅತೀ ಅವಶ್ಯವಾಗಿದೆ. ಈ ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮತಿ ಬೇಕು ಎಂದರು. ಇದಕ್ಕೆ ಸಂಬಂಧಿಸಿದ ಕಡತವನ್ನು ಸೂಕ್ತಕ್ರಮಕ್ಕೆ ಮಂಡಿಸಲು ಮುಖ್ಯಮಂತ್ರಿಗಳು ಅಪ್ತ ಕಾರ್ಯದರ್ಶಿಗೆ, ವೈದ್ಯಕೀಯ ಕಾಲೇಜುಗಳ ಕಾರ್ಯದರ್ಶಿಗೆ ಆದೇಶಿಸಿದರು.

Advertisement

ಕಳೆದ ಮೂರು ವರ್ಷಗಳಿಂದ ಈ ಹುದ್ದೆ ತುಂಬುವುದು ಬಾಕಿ ಇದೆ, ಇದು ತುರ್ತಾಗಿ ಆಗಬೇಕಾದ ಕೆಲಸ ಎಂದು ಯಡಿಯೂರಪ್ಪ ಅವರಿಗೆ ವಿವರಿಸಲಾಯಿತು. ಕಾರವಾರ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಯುವಕರಿಗೆ ನೌಕರಿಯಲ್ಲಿ ಸೌಲಭ್ಯ ಪಡೆಯಲು ಆರ್ಥಿಕ ಮಿತಿಯನ್ನು ಸಿ ದರ್ಜೆ ಮತ್ತು ನರ್ಸಿಂಗ್‌ ಹುದ್ದೆ ತುಂಬಲು ಸಡಿಲಿಸಬೇಕೆಂದು ಮನವಿ ಮಾಡಲಾಗಿದ್ದು, ಇದಕ್ಕೂ ಸಹ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕಿ ರೂಪಾಲಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ತಾಣವಾಗಿ ಸಿದ್ಧರ ಬೆಟ್ಟ: ಕಾರವಾರಕ್ಕೆ ಸಮೀಪದ ಸಿದ್ದರಾಮೇಶ್ವರ ಬೆಟ್ಟದ ಅಭಿವೃದ್ಧಿಗೆ ಸರ್ಕಾರದ ಬಳಿ ಶಾಸಕಿ ಮನವಿ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಈ ಸಂಬಂಧ ಗಮನ ಸೆಳೆಯಲಾಗಿದೆ. 12ನೇ ಶತಮಾನದ ವಚನಕಾರ ಸಿದ್ಧರಾಮೇಶ್ವರರು ನೆಲಸಿದ ತಾಣವಾಗಿದೆ. ಈ ಕ್ಷೇತ್ರ ಅಭಿವೃದ್ಧಿ ಮಾಡಲು ಬೆಟ್ಟದ ಸುತ್ತ 12 ಎಕರೆ ಅರಣ್ಯ ಪ್ರದೇಶವನ್ನು ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು. ಈ ಬೇಡಿಕೆಗೆ ಸಹ ಸಿಎಂ ಅಸ್ತು ಹೇಳಿದ್ದಾರೆ. ಸಂಬಂಧಿತ ಕಡತ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಿದ್ಧರ ಬೆಟ್ಟ ಸಿದ್ದರಾಮ ತಪೋವನ ಎಂದು ಈಗಾಗಲೇ ಹೆಸರಾಗಿದೆ. ಸಿದ್ಧರಾಮ ಬೆಟ್ಟ 7 ಹಳ್ಳಿಗಳಿಂದ ಆವರಿಸಿದೆ. ಲಿಂಗಾಯತರ ಧಾರ್ಮಿಕ ಕ್ಷೇತ್ರವಾಗಿದೆ. 1995ರಲ್ಲಿ ಇಲ್ಲಿ ದೇವಾಲಯ ನವೀಕರಣದ ವೇಳೆ ಹೊಸ ಮಂಡಳಿ ರಚನೆಯಾಗಿದೆ. ನಂತರ ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆದಿವೆ. ಇದಕ್ಕೆ ಆಧುನಿಕ ಸ್ಪರ್ಶ ನೀಡಬೇಕಿದೆ. ಪ್ರವಾಸಿತಾಣವಾಗಿ ಸಹ ಅಭಿವೃದ್ಧಿಯಾಗಬೇಕಿದೆ. ಶರಣರ ಆಶಯಗಳಿಗೆ ತಕ್ಕಂತೆ ಈ ಕ್ಷೇತ್ರವನ್ನು ಬೆಳೆಸಬೇಕಿದೆ. ತಪೋವನ ಅಭಿವೃದ್ಧಿಗೆ ಯೋಜನೆಯ ನೀಲನಕಾಶೆ ತಯಾರಾಗಿದೆ. ಇದಕ್ಕೆ ರಾಜ್ಯ ಸರ್ಕಾರ ನೆರವು ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಶಾಸಕಿ ರೂಪಾಲಿ ನಾಯ್ಕ ವಿನಂತಿಸಿದರು. ಸಿದ್ಧರಾಮೇಶ್ವರ ಬೆಟ್ಟದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಕೋರಿದರು. ಸಿಎಂ ಈ ಸಂಬಂಧ ಅಧಿಕಾರಿಗಳಿಗೆ ಕಡತ ಮಂಡಿಸಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next