ಕಲಬುರಗಿ: ಅಫಜಲಪುರ ತಾಲೂಕಿನಲ್ಲಿ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ 15 ಜನರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಶನಿವಾರ ಸ್ಥಳಾಂತರ ಮಾಡಿದ್ದಾರೆ.
ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಅಫಜಲಪುರ ತಾಲೂಕಿನ ಗ್ರಾಮಗಳು ಜಲಾವೃತವಾಗಿದೆ. ಶಿವೂರ – ಕಡಬೂರ ಗ್ರಾಮಗಳ ಮಧ್ಯೆ ನಡುಗಡ್ಡೆಯಲ್ಲಿ ಸಿಲುಕಿದ್ದ ತಂದೆ ಮತ್ತು ಮಗನನ್ನು ಎನ್ ಡಿ ಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು.
ಅದೇ ರೀತಿ ಹಳ್ಳ ಭೋಸಗಾ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ್ದ ಹತ್ತು ಜನ ಗ್ರಾಮಸ್ಥರನ್ನು ಪ್ರವಾಹದಿಂದ ರಕ್ಷಣಾ ತಂಡಗಳು ಸ್ಥಳಾಂತರ ಮಾಡಿವೆ. ಇನ್ನು, ಭೀಮಾ ಪ್ರವಾಹದಲ್ಲಿ ಅತಂತ್ರರಾಗಿದ್ದ ಹಿರಿಯಾಳ ಗ್ರಾಮದಲ್ಲಿ ಮೂವರನ್ನು ರಕ್ಷಣಾ ಮಾಡಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ:ಭೀಮಾ, ಕಾಗಿಣಾ ನದಿ ದಡದಲ್ಲಿರುವ ಗ್ರಾಮಸ್ಥರು ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ನೀರಿನ ಪ್ರಮಾಣದಲ್ಲಿ ಹೆಚ್ಚಾಗಿದ್ದರಿಂದ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಮೇಲೆ ವಾಹನ ಸಂಚಾರವನ್ನು ಮತ್ತೆ ನಿರ್ಬಂಧಿಸಲಾಗಿದೆ. ಇದರಿಂದ ಕಲಬುರಗಿಯಿಂದ ಬೆಂಗಳೂರು, ಹುಬ್ಬಳ್ಳಿ, ವಿಜಯಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಚಿತ್ತಾಪುರ ತಾಲೂಕಿನ ಭೀಮಾ ನದಿ ಪಾತ್ರದ ಕಡಬೂರು, ಮಾರಡಗಿ, ತುನ್ನೂರು, ಚಾಮನೂರು, ಕುಲಕುಂದಿ, ಕೊಲ್ಲೂರು ಹಾಗೂ ಸನ್ನತಿ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.