Advertisement

ಬಿಜೆಪಿ ಮಿತ್ರರಿಗೆ 15ರಿಂದ 19 ಸಂಪುಟ ಸೀಟು?

10:16 PM Jun 08, 2024 | Team Udayavani |

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ, ಅವರ ಕೇಂದ್ರ ಸಂಪುಟದಲ್ಲಿ ಯಾರೆಲ್ಲ ಸಚಿವರಾಗಲಿದ್ದಾರೆಂಬ ಕುತೂಹಲವೂ ಗರಿಗೆದರಿದೆ.

Advertisement

2014, 2019ಕ್ಕಿಂತ ಭಿನ್ನವಾದ ಪರಿಸ್ಥಿತಿ ಇದ್ದು, ಬಿಜೆಪಿಯು ಈ ಬಾರಿ ಕೆಲವು ಪ್ರಮುಖ ಖಾತೆಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡುವ ಅನಿವಾರ್ಯತೆ ಇದೆ. 15ರಿಂದ 18 ಸ್ಥಾನಗಳನ್ನು ಮಿತ್ರಪಕ್ಷಗಳು ಪಡೆಯುವ ಸಾಧ್ಯತೆಯೂ ದಟ್ಟವಾಗಿದೆ.

ಮೂಲಗಳ ಪ್ರಕಾರ, ಪ್ರಮುಖ ಮೈತ್ರಿ ಪಕ್ಷಗಳಾದ ಟಿಡಿಪಿಯು ಸ್ಪೀಕರ್‌ ಸ್ಥಾನ ಜತೆಗೆ ನಾಲ್ಕು ಹಾಗೂ ಜೆಡಿಯು 2ರಿಂದ 3 ಸಚಿವ ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಅವರು ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್‌ ಕುಮಾರ್‌ ಮತ್ತು ಶಿವಸೇನೆಯ ಏಕನಾಥ ಶಿಂದೆ ಜತೆಗೆ ಚರ್ಚಿಸಿ, ಸಂಪುಟವನ್ನು ಯಾರೆಲ್ಲ ಸೇರಬೇಕು ಎಂಬುದನ್ನು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಬಳಿ ಪ್ರಮುಖ ಖಾತೆಗಳು:
ಗೃಹ, ವಿತ್ತ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರ ಜತೆಗೆ ಶಿಕ್ಷಣ, ಸಂಸ್ಕೃತಿ ಇಲಾಖೆಗಳ ಜತೆಗೆ, ಸೈದ್ಧಾಂತಿಕವಾಗಿ ಮಹತ್ವವಾಗಿರುವ ಇನ್ನೆರಡು ಖಾತೆಗಳನ್ನು ಬಿಜೆಪಿಯು ತನ್ನ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಜತೆಗೆ, ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಅವರು ಸಚಿವರಾಗುವುದು ಬಹುತೇಕ ಪಕ್ಕಾ ಆಗಿದ್ದು, ಮಾಜಿ ಸಿಎಂಗಳಾದ ಶಿವರಾಜ್‌ ಸಿಂಗ್‌ ಚೌಹಾಣ್‌, ಕರ್ನಾಟಕದ ಬಸವರಾಜ ಬೊಮ್ಮಾಯಿ, ಮನೋಹರ ಲಾಲ್‌ ಖಟ್ಟರ್‌ ಅವರಿಗೂ ಸಚಿವ ಸ್ಥಾನ ದೊರೆಯುವ ನಿರೀಕ್ಷೆಗಳಿವೆ.

ಸಂಭಾವ್ಯ ಕೇಂದ್ರ ಸಚಿವರು:
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಉತ್ತರ ಪ್ರದೇಶದಿಂದ ಅಪ್ನಾದಳದ ಅನುಪ್ರಿಯಾ ಪಟೇಲ್‌, ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ (ರಾಮ್‌ವಿಲಾಸ್‌ ಪಾಸ್ವಾನ್‌), ಆರ್‌ಎಲ್‌ಡಿ ನಾಯಕ ಜಯಂತ್‌ ಚೌಧರಿ ಸಚಿವರಾಗಬಹುದು. ಬಿಹಾರದಿಂದ ಜೆಡಿಯುನ ಲಲ್ಲನ್‌ ಸಿಂಗ್‌, ರಾಮನಾಥ ಠಾಕೂರ್‌, ಎಚ್‌ಎಎಂನ ಜೀತನ್‌ರಾಮ್‌ ಮಾಂಝಿ, ಬಿಜೆಪಿಯಿಂದ ರಾಜೀವ್‌ ಪ್ರತಾಪ್‌ ರೂಢಿ, ಜಿತಿನ್‌ ಪ್ರಸಾದ್‌, ನಿತ್ಯಾನಂದ ರೈ ಹಾಗೂ ಮಹಾರಾಷ್ಟ್ರದಿಂದ ನಿತಿನ್‌ ಗಡ್ಕರಿ ಮತ್ತು ಪೀಯೂಷ್‌ ಗೋಯೆಲ್‌ ಸಂಪುಟ ಸೇರುವುದು ಪಕ್ಕಾ ಆಗಿದೆ. ಮಧ್ಯಪ್ರದೇಶದಿಂದ ಜ್ಯೋತಿರಾಧಿತ್ಯ ಸಿಂಧಿಯಾ, ಜತೆಗೆ ಕೇರಳದ ಏಕೈಕ ಬಿಜೆಪಿಯ ಸಂಸದ ಸುರೇಶ್‌ ಗೋಪಿ ಅವರಿಗೂ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.

Advertisement

ಅದೇ ರೀತಿ, ಒಡಿಶಾದ ಬಿಜೆಪಿಯ ಧರ್ಮೇಂದ್ರ ಪ್ರಧಾನ್‌, ಮನಮೋಹನ್‌ ಸಮಲ್‌ ಸಂಪುಟ ಸೇರುವ ನಿರೀಕ್ಷೆ ಇದೆ.

ಮಾಜಿ ಸಿಎಂ ಸರ್ಬಾನಂದ ಸೋನೋವಾಲ್‌, ಬಿಪ್ಲಬ್‌ ದೇವ್‌, ಕಿರಣ್‌ ರಿಜಿಜು, ರಾಜಸ್ಥಾನದಿಂದ ಗಜೇಂದ್ರ ಶೆಖಾವತ್‌, ದುಷ್ಯಂತ್‌ ಸಿಂಗ್‌ ಸಚಿವರಾಗಬಹುದು ಎನ್ನಲಾಗಿದೆ. ಅದೇ ರೀತಿ, ತೆಲಂಗಾಣದ ಕಿಶನ್‌ ರೆಡ್ಡಿ, ಡಿ.ಕೆ.ಅರುಣಾ, ಡಿ.ಅರವಿಂದ್‌ ಅವರು ಸಚಿವರಾಗುವ ಸಾಧ್ಯತೆ ಇದೆ.

ಯಾರ್ಯಾರಿಗೆ ಲಕ್‌?
ಅನುಪ್ರಿಯಾ ಪಟೇಲ್‌, ಅಪ್ನಾದಳ
ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ
ಜಯಂತ್‌ ಚೌಧರಿ, ಆರ್‌ಎಲ್‌ಡಿ
ಲಲ್ಲನ್‌ ಸಿಂಗ್‌, ಜೆಡಿಯು
ರಾಮನಾಥ ಠಾಕೂರ್‌, ಜೆಡಿಯು
ಜೀತನ್‌ರಾಮ್‌ ಮಾಂಝಿ, ಎಚ್‌ಎಎಂ
ಸುರೇಶ್‌ ಗೋಪಿ, ಬಿಜೆಪಿ
ಕಿಶನ್‌ ರೆಡ್ಡಿ, ಬಿಜೆಪಿ
ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next