Advertisement

15 ಪ್ರಮುಖ ರಸ್ತೆಗಳು ಸೀಲ್‌ಡೌನ್‌

05:43 AM Jun 25, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ಸೋಂಕು ನಿಯಂತ್ರಣಕ್ಕಾಗಿ ಕೆ.ಆರ್‌. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಸೇರಿ ಒಟ್ಟು 15 ಪ್ರಮುಖ ರಸ್ತೆಗಳನ್ನು ಸೀಲ್‌ಡೌನ್‌ ಮಾಡಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಬುಧವಾರ ಆದೇಶಿಸಿದ್ದಾರೆ. ಈ ಸೀಲ್‌ಡೌನ್‌ ಮಾಡಲಾದ ಪ್ರದೇಶಗಳಲ್ಲಿ ಈ ಹಿಂದೆ ಪಾದರಾಯನಪುರದಲ್ಲಿ ಅನುಸರಿಸಿದ ಮಾರ್ಗಸೂಚಿಗಿಂತ ಕಠಿಣ ಮಾರ್ಗಸೂಚಿ ಅಳವಡಿಸಿಕೊಳ್ಳಲಾಗಿದೆ.

Advertisement

ಈ  ಪ್ರದೇಶಗಳಲ್ಲಿ ಜನರ ಆರೋಗ್ಯ ಪರೀಕ್ಷೆ, ಸೋಂಕಿತರ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಾಚರಣೆ ಹೆಚ್ಚು ಮುಂಜಾಗ್ರತೆ ವಹಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ,  ಉಸಿರಾಟದ ಸಮಸ್ಯೆ, ಸೋಂಕಿನ ಲಕ್ಷಣ ಕಾಣಿಸಿಕೊಂಡವರ ಪರೀಕ್ಷೆ, ಸ್ಯಾಬ್‌ ಸಂಗ್ರಹ ಹಾಗೂ ರ್‍ಯಾಂಡಮ್‌ ಪರೀಕ್ಷೆಗೆ ಸೂಚನೆ ನೀಡಲಾಗಿದೆ.

ಅಲ್ಲದೆ, ಈ ಸೀಲ್‌ಡೌನ್‌ ರಸ್ತೆಗಳಲ್ಲಿ ಕಸ ವಿಲೇವಾರಿ, ನೀರು ಹಾಗೂ ಸ್ವತ್ಛತೆ ಸೇರಿದಂತೆ  ಪಾಲಿಕೆ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಸಮನ್ವಯ ತಂಡ ರಚನೆ ಮಾಡಿಕೊಳ್ಳಲು ಆಯುಕ್ತರು ನಿರ್ದೇಶನ ನೀಡಿದ್ದಾರೆ. ಈ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆ, ಜನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಕರಣಗಳು  ಹೆಚ್ಚು ಕಂಡು ಬಂದಿದೆ. ಅಲ್ಲದೆ, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಆತಂಕ ಎದುರಾಗಿದ್ದು, ಸೀಲ್‌ ಡೌನ್‌ ಮಾಡಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸೀಲ್‌ಡೌನ್‌ ಆದ ರಸ್ತೆಗಳು: ಟೌನ್‌ಹಾಲ್‌ ಸರ್ಕಲ್‌, ಜೆಸಿ ರಸ್ತೆ, ಎಎಂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೆ.ಆರ್‌. ಮಾರುಕಟ್ಟೆ ಜಂಕ್ಷನ್‌ ಮತ್ತು ಸರ್ವಿಸ್‌ ರಸ್ತೆ, ತರಗುಪೇಟೆ ರಸ್ತೆ (2ನೇ ಮುಖ್ಯರಸ್ತೆ), ಟಿಪ್ಪು ಅರಮನೆ ರಸ್ತೆ, ತರಗುಪೇಟೆ ರಸ್ತೆ  (4ನೇ ಮುಖ್ಯ ರಸ್ತೆ), ಭಾಷ್ಯಂರಸ್ತೆ, ಶ್ರೀನಿವಾಸ ಮಂದಿರಂ ರಸ್ತೆ, ಕಿಲರಿ ರಸ್ತೆ, ಆಂಜನೇಯ ಸ್ವಾಮಿದೇವಸ್ಥಾನ ರಸ್ತೆ, ಸನಕಲಪೇಟೆ ರಸ್ತೆ ಹಾಗೂ ಎಸ್‌ಜಿಪಿ ರಸ್ತೆಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಪರೀಕ್ಷಾ ಕೇಂದ್ರಕ್ಕೆ ಅವಕಾಶ: ಸೀಲ್‌ಡೌನ್‌ ಮಾಡಲಾಗಿರುವ ಪ್ರದೇಶದ ಸುತ್ತಮುತ್ತ ಎಸ್‌ ಎಸ್‌ಎಲ್‌ಸಿ ಸೆಂಟರ್‌ಗಳಿದ್ದರೆ ಅಲ್ಲಿಯೂ ಬಿಬಿಎಂಪಿ ವಿನಾ ಯಿತಿ ನೀಡಿದೆ. ಆದರೆ, ಇದನ್ನು ಬಳಸಿಕೊಳ್ಳುವುದು ಅಥವಾ ಬಿಡುವ  ನಿರ್ಧಾರವನ್ನು ಶಿಕ್ಷಣ ಇಲಾಖೆಗೆ ಬಿಡಲಾಗಿದೆ.

Advertisement

ಸೀಲ್‌ಡೌನ್‌ ಪ್ರದೇಶದಲ್ಲಿ ನಿಂತಿಲ್ಲ ವ್ಯಾಪಾರ!: ಕೋವಿಡ್‌ 19 ಸೋಂಕು ವ್ಯಾಪಕವಾದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದಯೇ ಕೆ.ಆರ್‌. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಬಂದ್‌ ಮಾಡುವಂತೆ ಆದೇಶ  ಮಾಡಲಾಗಿದೆ. ಆದರೂ ಬುಧವಾರ ವ್ಯಾಪಾರ ಎಂದಿನಂತೆ ಸಾಗಿದೆ. ಮಂಗಳವಾರ ಕೆ.ಆರ್‌ ಮಾರುಕಟ್ಟೆ, ಸಿದ್ದಾಪುರ, ವಿ.ವಿ.ಪುರ, ಸಿದ್ದಾಪುರ ಹಾಗೂ ಚಾಮರಾಜಪೇಟೆ ವಾರ್ಡ್‌ಗಳ ಕೆಲವು ಪ್ರದೇಶ ಮತ್ತು ರಸ್ತೆಗಳನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ಮಾರುಕಟ್ಟೆಯ ಸೀಲ್‌ಡೌನ್‌ ಪ್ರದೇಶದ ಸುತ್ತಲೂ ತಳ್ಳುಗಾಡಿಗಳಲ್ಲಿ ವ್ಯಾಪಾರ ಮುಂದುವರಿದಿತ್ತು. ಜನ ಸಹ ಎಂದಿನಂತೆ ಮಾರುಕಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ಸಾಮಾಜಿಕ ಅಂತರ  ಕಾಯ್ದುಕೊಳ್ಳದೆ ಸೇರುತ್ತಿರುವುದು ಕಂಡುಬಂತು.

ಬಿಎಂಟಿಸಿಯ ಲ್ಲಿ ಮತ್ತೆರಡು ಪಾಸಿಟಿವ್‌ ಪ್ರಕರಣ ಪತ್ತೆ: ಕೇವಲ ನಾಲ್ಕು ದಿನಗಳ ಅಂತರದಲ್ಲಿ ಬಿಎಂಟಿಸಿಯ ಮತ್ತೆ ಇಬ್ಬರು ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ನಗರದ  ಕೆ.ಆರ್‌. ಮಾರುಕಟ್ಟೆ ಡಿಪೋದ ಸಂಚಾರ ನಿಯಂತ್ರಕ ಮತ್ತು ಆರ್‌. ಆರ್‌. ನಗರ ಡಿಪೋದ ಚಾಲಕನಿಗೆ ಬುಧವಾರ ಸೋಂಕು ದೃಢಪಟ್ಟಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಅವರೊಂದಿಗೆ ಪ್ರಾಥಮಿಕ  ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸಂಚಾರ ನಿಯಂತ್ರಕನಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.

ಈ ಹಿನ್ನೆಲೆಯಲ್ಲಿ ಈಚೆಗೆ ಶಾಂತಿನಗರದಲ್ಲಿ ನಡೆದ ರ್‍ಯಾಂಡಮ್‌ ಟೆಸ್ಟ್‌ ವೇಳೆ ಪರೀಕ್ಷೆಗೆ ಆಗಮಿಸಿದ್ದರು. ಆದರೆ, ನಿಗದಿತ ಗಂಟಲು ದ್ರವ ಸಂಗ್ರಹ ಪೂರ್ಣಗೊಂಡಿದ್ದರಿಂದ ಪರೀಕ್ಷೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದರು. ವರದಿಯಲ್ಲಿ  ಸೋಂಕಿರುವುದು ದೃಢಪಟ್ಟಿದೆ. ಅದೇ ರೀತಿ, ಆರ್‌.ಆರ್‌. ನಗರ ಚಾಲಕನಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೊಳಗಾಗಿದ್ದರು. “ಪಾಸಿಟಿವ್‌’ ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಟಿ ಮಾರುಕಟ್ಟೆ, ಕೆಂಗೇರಿ ಠಾಣೆ ಸೀಲ್‌ಡೌನ್‌: ಸಿ.ಟಿ.ಮಾರುಕಟ್ಟೆ ಮತ್ತು ಕೆಂಗೇರಿ ಠಾಣೆಯ ನಾಲ್ವರು ಅಧಿಕಾರಿ-ಸಿಬ್ಬಂದಿಯಲ್ಲಿ ಕೋವಿಡ್‌ 19 ಕಾಣಿಸಿಕೊಂಡಿದ್ದು, ಎರಡು ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಸಿ.ಟಿ.ಮಾರುಕಟ್ಟೆ  ಠಾಣೆಯ ಎಎಸ್‌ಐ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಈ ಹಿಂದಿನ ಸೋಂಕಿತರ ಜತೆ ಸಂಪರ್ಕ ದಲ್ಲಿದ್ದರು. ಹೀಗಾಗಿ ಮೂರು ದಿನಗಳ ಹಿಂದೆ ಇಬ್ಬರ ಗಂಟಲು ದ್ರವ ಪರೀಕ್ಷೆಗೊಳಪಡಿಸಿದ್ದು, ಬುಧವಾರ ವರದಿ ಬಂದಾಗ ಪಾಸಿಟಿವ್‌  ಕಾಣಿಸಿಕೊಂಡಿದೆ.

ಇನ್ನು ಕೆಂಗೇರಿ ಠಾಣೆಗೆ ಕೆಲ ದಿನಗಳ ಹಿಂದೆ ಕಲಾಸಿಪಾಳ್ಯದ ಪೊಲೀಸ್‌ ಸಿಬ್ಬಂದಿಯೊಬ್ಬರು ಮನೆ ಕಳ್ಳತನದ ಬಗ್ಗೆ ದೂರು ನೀಡಲು ಬಂದಿದ್ದರು. ಈ ವೇಳೆ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರನ್ನು  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾ ಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 50 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಹಾಗೆಯೇ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಪಕ್ಕದಲ್ಲೇ ಇರುವ  ಕ್ವಾರ್ಟರ್ಸ್‌ನಲ್ಲಿ ತಾತ್ಕಾಲಿಕ ಠಾಣೆ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಏನಿರುತ್ತೆ: ಹಣ್ಣು, ತರಕಾರಿ, ಮಾಂಸ ಮಾರಾಟ ಹಾಗೂ ದಿನಸಿ ಸೇರಿ ಅತ್ಯಾವಶ್ಯಕ ವಸ್ತುಗಳ ಮಾರಾಟ ಮತ್ತು ಖರೀದಿ  ಆಸ್ಪತ್ರೆಗಳು, ಕ್ಲಿನಿಕ್‌ ಹಾಗೂ ಮೆಡಿಕಲ್‌ ಶಾಪ್‌ಗ್ಳು ತೆರೆದಿರಲಿವೆ ದಿನಪತ್ರಿಕೆ, ಹಾಲು ಹಾಗೂ ಅತ್ಯಾವಶ್ಯಕ ವಸ್ತುಗಳು ಸಿಗಲಿವೆ

ಏನಿರಲ್ಲ: ಎಲ್ಲ ವಾಣಿಜ್ಯ ವಹಿವಾಟು ನಡೆಸುವ ಅಂಗಡಿಗಳು ಬಂದ್‌ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬೀದಿ ವ್ಯಾಪಾರಕ್ಕೂ ಇಲ್ಲ ಅವಕಾಶ  ಧಾರ್ಮಿಕ ಕೇಂದ್ರಗಳು ತೆರೆಯುವುದಕ್ಕೆ ಅಥವಾ ಜನ ಸಮೂಹ ಸೇರುವಂತಹ  ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಮದ್ಯ ಮಾರಾಟ ಮಾಡುವಂತಿಲ್ಲ ಹೂವಿನ ಮಾರುಕಟ್ಟೆ ಮತ್ತು ಅಂಗಡಿಗಳು ಬಂದ್‌.

Advertisement

Udayavani is now on Telegram. Click here to join our channel and stay updated with the latest news.

Next