ಗದಗ: ಕಡಿಮೆ ದರದಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿಕೇರಿ ಮೂಲಕ ಬಾಲಕೃಷ್ಣ ರೈ ಹಾಗೂ ಬಿ.ಕೆ.ನಾರಾಯಣ ಎಂಬುವವರು ಮೋಸ ಹೋದವರಾಗಿದ್ದಾರೆ.
ಇವರಿಗೆ ಗದಗ ಮೂಲದವರು ಎಂದು ಹೇಳಿ ಮೊಬೈಲ್ ಮೂಲಕ ಪರಿಚಯಿಸಿಕೊಂಡಿದ್ದ ರಮೇಶ್ ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ, ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
‘ನಾನು ಈ ಹಿಂದೆ ಮಡಿಕೇರಿಯಲ್ಲಿ ಕೆಲಸ ಮಾಡಿದ್ದು, ನನಗೆ ನಿಮ್ಮ ಪರಿಚಯವಿದೆ. ಇದೀಗ ನಿಮ್ಮ ಭಾವ ಬಿ.ಕೆ.ನಾರಾಯಣ ಅವರ ಮಗನ ಮದುವೆ ಇದೆ ಎಂಬ ವಿಷಯ ಗೊತ್ತಾಗಿದೆ. ಅದಕ್ಕೆ ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುತ್ತೇನೆ’ ಎಂದು ಆರೋಪಿ ಬಾಲಕೃಷ್ಣ ರೈ ಅವರಿಗೆ ಹೇಳಿದ್ದ.
ಆರೋಪಿಯ ಮಾತನ್ನು ನಂಬಿದ್ದ ದೂರುದಾರರು ಆ.11 ರಂದು 15 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ತಮ್ಮ ಕಾರಿನಲ್ಲೇ ಮುಂಡರಗಿಗೆ ಆಗಮಿಸಿದ್ದರು. ಇಲ್ಲಿಗೆ ಬಂದು ಆರೋಪಿಗೆ ಕರೆ ಮಾಡಿದ ಸಂದರ್ಭದಲ್ಲಿ ಆರೋಪಿ ರಮೇಶ್ ಇವರಿಬ್ಬರನ್ನು ಬೆಣ್ಣೆಹಳ್ಳಿ ಕ್ರಾಸ್ ಗೆ ಬರುವಂತೆ ತಿಳಿಸಿದ್ದನು.
ಆರೋಪಿಯ ಮಾತಿನಂತೆ ಬಾಲಕೃಷ್ಣ ಹಾಗೂ ನಾರಾಯಣ ಅವರು ಬೆಣ್ಣೆಹಳ್ಳಿ ಕ್ರಾಸ್ ಗೆ ಬಂದು ಆರೋಪಿಗಳನ್ನು ಭೇಟಿಯಾಗುತ್ತಾರೆ. ಈ ಸಂದರ್ಭದಲ್ಲಿ ಚಿನ್ನ ತೆಗೆದುಕೊಂಡು ಬರುವುದಾಗಿ ಹೇಳಿ ಇವರಿಂದ 15 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಹೋಗಿದ್ದು, ಚಿನ್ನವೂ ಇಲ್ಲದೇ ಹಣವೂ ಇಲ್ಲದೆ ಆರೋಪಿಗಳು ಮರಳಿ ಬಾರದೇ ವಂಚಿಸಿದ್ದಾರೆ ಎಂದು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮುಂಡರಗಿ ಠಾಣೆ ಪೊಲೀಸರು ವಂಚಕ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.