ಮಂಗಳೂರು: ಕುವೈಟ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಡೊಮಿನಿಕ್ ಕಿಶೋರ್ ಡಿ’ಸೋಜಾ ಅವರಿಗೆ ಕೆನಡದ ವೀಸಾ ಕೊಡಿಸುವುದಾಗಿ ಹೇಳಿ 15 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಅವರ ತಂದೆ ಹೆರಾಲ್ಡ್ ಡಿ’ಸೋಜಾ ಅವರು ಕಾವೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಡೊಮಿನಿಕ್‌ನ ಸ್ನೇಹಿತನಾದ ಮಂಗಳೂರು ಗಂಜಿಮಠ ನಿವಾಸಿ ರೋಶನ್ ನವೀನ್ ಕ್ರಾಸ್ಟೋ ಫೋನ್ ಮೂಲಕ ಸಂಪರ್ಕಿಸಿ ಕೆನಡ ದೇಶದ ವೀಸಾವನ್ನು ಆತನಿಗೆ ಪರಿಚಯವಿರುವ ಜೇಮ್ಸ್ ಡಿ’ಸೋಜಾ ಮಾಡಿಸಿಕೊಡುವುದಾಗಿ ಹಾಗೂ ಯಾರಿಗಾದರೂ ವೀಸಾ ಬೇಕಾಗಿದ್ದರೆ ತಿಳಿಸುವಂತೆ ಹೇಳಿದ್ದ.
ಅದರಂತೆ ಡೊಮಿನಿಕ್‌ಗೆ ರೋಶನ್ ನವೀನ್ ಕಳೆದ ಜನವರಿ ತಿಂಗಳ ಮೊದಲನೇ ವಾರದಲ್ಲಿ ಫೋನ್ ಮುಖಾಂತರ ಜೇಮ್ಸ್ ಡಿ’ಸೋಜಾನ ಪರಿಚಯ ಮಾಡಿ ಕೊಟ್ಟಿದ್ದ. 30 ಲಕ್ಷ ರೂ. ಹಣ ನೀಡಿದರೆ ಡೊಮಿನಿಕ್ ಹಾಗೂ ಅವರ ಹೆಂಡತಿಗೆ ವೀಸಾ ಮಾಡಿಕೊಡುವುದಾಗಿ ಜೇಮ್ಸ್ ತಿಳಿಸಿದ್ದ. ಅದರಲ್ಲಿ 15 ಲಕ್ಷ ರೂ. ಹಣವನ್ನು ವೀಸಾ ಮಾಡುವ ಮೊದಲು ಹಾಗೂ ಉಳಿದ 15 ಲಕ್ಷ ರೂ. ಹಣವನ್ನು ಕೆನಡ ದೇಶಕ್ಕೆ ಹೊದ ಅನಂತರ ನೀಡಬೇಕೆಂದು ತಿಳಿಸಿದ್ದ.
ಅದರಂತೆ ಸುಮಾರು 9 ಕಂತುಗಳಲ್ಲಿ 15 ಲಕ್ಷ ರೂ. ಪಾವತಿಸಿದ್ದು, ಅದರಲ್ಲಿ 5 ಲಕ್ಷ ರೂ. ಹಣವನ್ನು ಅವರ ಸಂಬಂಧಿ ಅರುಣ್ ಡೆರಿಕ್ ಮೊಂತೇರೊ ಅವರ ಖಾತೆಯ ಮೂಲಕ ಜೇಮ್ಸ್ ತಿಳಿಸಿದ ಖಾತೆಗೆ ಜಮೆ ಮಾಡಲಾಗಿದೆ. ವೀಸಾ ಪಡೆಯುವ ಹಿನ್ನಲೆಯಲ್ಲಿ ಮೇ 26ರಂದು ಐ.ಇ.ಎಲ್.ಟಿ.ಎಸ್. ಪರೀಕ್ಷೆ ಇರುವುದಾಗಿ ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜೇಮ್ಸ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾವುದೇ ಉತ್ತರವನ್ನೂ ನೀಡದೆ ಹಣವನ್ನೂ ವಾಪಸು ಮಾಡದೆ ಮೋಸ ಮಾಡಿದ್ದಾನೆ. ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿರುವ ಮಾಹಿತಿ ಇದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.