Advertisement

4 ವರ್ಷದಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿ

12:27 PM Nov 24, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರವು ನಾಲ್ಕು ವರ್ಷಗಳಲ್ಲಿ 13.19 ಲಕ್ಷ ಉದ್ಯೋಗ ಸೃಷ್ಟಿಸಿದೆ. 2019ರ ವೇಳೆಗೆ 15 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಹಾಕಿಕೊಂಡಿರುವುದಾಗಿ ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ರಾಜ್ಯ ಸರ್ಕಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ ಉದ್ಘಾಟಿಸಿ ಮಾತನಾಡಿ, “ಯುವ ಜನತೆ ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ಸೃಷ್ಟಿಕರ್ತರಾಗಬೇಕು.

ಭಾರತವು ವಿಶ್ವದ ಯುವ ರಾಷ್ಟ್ರವಾಗಿದ್ದು, ಉದ್ಯೋಗ ಸೃಷ್ಟಿಗೆ ಹಲವು ಮಾರ್ಗವನ್ನು ಸಂಶೋಧಿಸುತ್ತಿದ್ದೇವೆ’ ಎಂದು ಹೇಳಿದರು. 2013ರಿಂದ ಈವರೆಗೆ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ 12.03 ಲಕ್ಷ, ಬೃಹತ್‌ ಕೈಗಾರಿಕೆಗಳಿಂದ 1.88 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. 2018ರೊಳಗೆ 5.79 ಉದ್ಯೋಗ ಸೃಷ್ಟಿಸುವ ಕಾರ್ಯ ಪ್ರಗತಿಯಲ್ಲಿದೆ ಎಂಬ ಮಾಹಿತಿ ನೀಡಿದರು.

ಶೇ.11ಜವಳಿ ರಫ್ತು: ಜವಳಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಜವಳಿ ಉದ್ಯಮದಲ್ಲಿ ಲಕ್ಷಾಂತರ ಜನರು ತೊಡಗಿಸಿಕೊಂಡಿದ್ದಾರೆ. ಕರ್ನಾಟಕದಿಂದ ಶೇ.11 ಜವಳಿ ಉತ್ಪನ್ನ ರಫ್ತು ಮಾಡುತ್ತಿದ್ದೇವೆ. 2013-18ರ ಜವಳಿ ನೀತಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

ಫೆಸಿಲಿಟಿ ಕೇಂದ್ರಕ್ಕೆ ಶಂಕುಸ್ಥಾಪನೆ: ದೇವನಹಳ್ಳಿಯಲ್ಲಿ ವಿಮಾನದ ಬಿಡಿಭಾಗ ಉತ್ಪಾದಿಸುವ ಕಾಮನ್‌ ಫಿನಿಶಿಂಗ್‌ ಫೆಸಿಲಿಟಿ ಕೇಂದ್ರದ ಶಿಲಾನ್ಯಾಸ ನೆರವೇರಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 210 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ.

Advertisement

ಕೇಂದ್ರ ಸರ್ಕಾರ 42 ಕೋಟಿ ರೂ. ನೀಡಲಿದ್ದು, ಉಳಿಕೆ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. ಕೆಐಎಡಿಬಿ ನೀಡಿದ 40 ಎಕರೆ ಜಾಗದಲ್ಲಿ ನಿರ್ಮಾಣವಾಗುವ ಈ ಕೇಂದ್ರದಲ್ಲಿ ವಿಮಾನದ ಬಿಡಿಭಾಗ ತಯಾರಿ, ಎಲೆಕ್ಟ್ರಿಕ್‌ ಭಾಗಗಳ ತಯಾರಿ, ವಿಮಾನಕ್ಕೆ ಬಣ್ಣ ಬಳಿಯುವುದು ಹಾಗೂ ಕೊನೆ ಹಂತದ ತಯಾರಿ ಪ್ರಕ್ರಿಯೆಗಳು ನಡೆಯಲಿವೆ.

ಏರೊನಾಟಿಕಲ್‌ ಎಂಜಿನಿಯರಿಂಗ್‌, ಉತ್ಪಾದನೆ, ಎಲೆಕ್ಟ್ರಿಕಲ್‌ ವಾಹನಗಳು, ಡ್ರೋಣ್‌ ತಂತ್ರಜ್ಞಾನ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದೇವೆ. ಹೊಸ ಉದ್ಯೋಗ ಸೃಷ್ಟಿಸುವಲ್ಲಿ ಮುಂದಿದ್ದೇವೆ. ಭವಿಷ್ಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಕಿರಣ್‌ ಮಜುಂದರ್‌ ಷಾ, ಬಯೊಕಾನ್‌

ದೇಶಿ, ವಿದೇಶಿ ಸಂಸ್ಥೆಗಳ ಸಮಾಗಮ: ರಾಜ್ಯ ಸರ್ಕಾರ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯಲ್ಲಿ ದೇಶಿ ಹಾಗೂ ವಿದೇಶಿ ಸಂಸ್ಥೆಗಳ ಸಮಾಗಮದ ಜೊತೆಗೆ ಗುಡಿ ಕೈಗಾರಿಕೆಯಿಂದ ಬೃಹತ್‌ ಕೈಗಾರಿಕೆಗಳು ತಮ್ಮ ಉತ್ಪನ್ನದ ಪರಿಚಯ ಮಾಡಿಸಿದರು.

ಎಚ್‌ಎಎಚ್‌, ಟಾಟಾ, ಜೆ.ಕೆ.ಟಯರ್ ಮೊದಲಾದ ದೇಶಿ ಸಂಸ್ಥೆಗಳ ಜತೆಗೆ ವೋಲ್ವೊ, ಟೊಯೊಟಾ ಕಿರ್ಲೋಸ್ಕರ್‌ ಸಂಸ್ಥೆಗಳು ಭಾಗವಹಿಸಿವೆ. ಖಾದಿ ಉದ್ಯಮ, ತೆಂಗು ನಾರು ಅಭಿವೃದ್ಧಿ ಮಂಡಳಿಯ ಉತ್ಪನ್ನ, ಗುಡಿ ಕೈಗಾರಿಕೆಗಳಿಂದ ತಯಾರಾದ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇಲ್ಲಿದೆ.

ಮಷಿನ್‌ ಟೂಲ್‌ಗ‌ಳು, ಬಟ್ಟೆ, ವಾಹನಗಳ ಬಿಡಿಭಾಗ, ಪಂಪ್‌ಸೆಟ್‌, ಟಯರ್‌, ಫ್ಯಾಬ್ರಿಕ್‌ ಮೊದಲಾದ ಉತ್ಪನ್ನಗಳನ್ನು ತಯಾರಿಸುವ ಸುಮಾರು 700 ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ 300 ಬೃಹತ್‌ ಕೈಗಾರಿಕೆಗಳು ತಮ್ಮ ಉತ್ಪನ್ನದ ಪ್ರದರ್ಶನಕ್ಕೆ ಇಟ್ಟಿದ್ದರು.

ಮುಂದಿನ 10 ವರ್ಷಗಳಲ್ಲಿ ಒಂದು ಸಾವಿರ ವಿಮಾನಗಳ ನಿರ್ಮಾಣ ಗುರಿ ಹೊಂದಿದ್ದೇವೆ. ಭಾರತೀಯ ಮೈತ್ರಿಕೂಟದ ಸುಖೋಯ್‌-30ಎಂಕೆಐ ಮೂಲಕ ಬ್ರಹ್ಮೋಸ್‌ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆಯಾಗಿದೆ. 2,500 ಕೇಜಿ ತೂಕದ ಕ್ಷಿಪಣಿಯಲ್ಲಿ ಬೆಂಗಳೂರಿನ ಹಲವಾರು ಬಿಡಿಭಾಗಗಳ ಸಂಸ್ಥೆಗಳ ಕೊಡುಗೆ ಇದೆ.
-ಟಿ.ಸುವರ್ಣ ರಾಜು, ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next