ಕುಕನೂರು: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪಟ್ಟಣದ ಜನರಿಗೂ ತಟ್ಟಿದೆ. ನೆರೆಯಿಂದ ಅಲ್ಲಲ್ಲಿ ರಸ್ತೆಗಳು ಕೆಟ್ಟು ಹೋಗಿದ್ದರಿಂದ ಸರಕು ಸಾಗಾಟ ವಾಹನಗಳ ಸಂಚಾರ ಸ್ಥಗಿತಗೊಂಡು ಪಟ್ಟಣ ಸೇರಿದಂತೆ ಹಲವೆಡೆ ಸಮಪರ್ಕವಾಗಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಜನತೆ ಅಡುಗೆ ಅನಿಲಕ್ಕಾಗಿ ಪರದಾಡುವಂತಾಗಿದೆ.
ಕಳೆದ ತಿಂಗಳು ಉಂಟಾದ ನೆರೆಯಿಂದ ಬೆಳಗಾವಿ ಮತ್ತು ಧಾರವಾಡದಲ್ಲಿ ಪೆಟ್ರೋಲಿಯಂ ಪ್ಲಾಂಟ್‌ಗಳಿಂದ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನೆರೆಯಿಂದ ಸಿಲಿಂಡರ್ ಸಮಸ್ಯೆಯಾಗಿದೆ ಎಂದು ಏಜೆನ್ಸಿ ಕಚೇರಿ ಮುಂದೆ ಬೋರ್ಡ್ ಹಾಕಲಾಗಿದೆ. ಈ ಪ್ಲಾಂಟ್‌ಗಳನ್ನೇ ಅವಲಂಬಿಸಿರುವ ತಾಲೂಕಿನಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಕಟ್ಟಿಗೆ ಹಾಗೂ ವಿದ್ಯುತ್ ಒಲೆಗಳ ಮೊರೆ ಹೋಗುವಂತಾಗಿದೆ.
ಎಚ್ಪಿ ಗ್ಯಾಸ್, ಭಾರತ ಪೆಟ್ರೋಲಿಯಂ ಗ್ಯಾಸ್ ಸೇರಿದಂತೆ ವಿವಿಧ ಬಗೆಯ ಅಡುಗೆ ಅನಿಲ ಸಿಲಿಂಡರ್‌ಗಳಿಗಾಗಿ ಗ್ರಾಹಕರು ಮೊಬೈಲ್ ಮೂಲಕ ನೋಂದಾಯಿಸಿಕೊಂಡಿದ್ದು, 15 ದಿನಗಳಿಂದ ಕಾದರು ಅಡುಗೆ ಸಿಲಿಂಡರ್ ಸಿಗುತ್ತಿಲ್ಲ. 20ರಿಂದ 25 ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್‌ಗಾಗಿ ಬೇಡಿಕೆ ಸಲ್ಲಿಸಿದವರಿಗೆ ಈಗೀಗ ಪೂರೈಕೆಯಾಗುತ್ತಿದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಜನ ಬೆಳಗ್ಗೆಯೇ ಖಾಲಿ ಸಿಲಿಂಡರ್‌ಗಳೊಂದಿಗೆ ಗ್ಯಾಸ್ ಏಜೆನ್ಸಿ ಕಚೇರಿಗಳಿಗೆ ಧಾವಿಸುತ್ತಿದ್ದಾರೆ. ನಗರದಲ್ಲಿರುವ ಹೊಸಮನಿ ಗ್ಯಾಸ್ ಏಜೆನ್ಸಿ ಎದುರು ಬೆಳಗ್ಗೆ 6ರಿಂದಲೇ ಜನರು ಸಾಲುಗಟ್ಟುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಡವಾಗಿ ಬಂದರೆ ಸಿಲಿಂಡರ್ ಸಿಗದು ಎನ್ನುತ್ತಾರೆ ಗ್ರಾಹಕರು. ಕಳೆದ ತಿಂಗಳು ನೆರೆ ಉಂಟಾಗಿದ್ದರಿಂದ ನಾಲ್ಕೈದು ದಿನಗಳ ಕಾಲ ಗ್ಯಾಸ್ ಪ್ಲಾಂಟ್‌ಗಳು ಬಾಗಿಲು ಮುಚ್ಚಿದ್ದವು. ಅದರೊಂದಿಗೆ ಆರೇಳು ದಿನ ಸಿಲಿಂಡರ್ ಸಾಗಿಸುವ ವಾಹನಗಳು ಸಂಚರಿಸಲಿಲ್ಲ. ನೆರೆ ನಿಂತ ಬಳಿಕ ಈ ಭಾಗದ ಬಹುತೇಕ ಗ್ಯಾಸ್ ಏಜೆನ್ಸಿಗಳಿಗೆ ವಾಣಿಜ್ಯ ಉದ್ದೇಶಿತ ಸೇರಿದಂತೆ ದಿನಕ್ಕೆ ತಲಾ 200ರಿಂದ 250 ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ಇದು ಈ ಹಿಂದೆ ಪೂರೈಕೆಯಾಗುತ್ತಿದ್ದ ಸಿಲಿಂಡರ್‌ಗಳ ಸಂಖ್ಯೆಗಿಂತ ಭಾಗಶಃ ಕಡಿಮೆ. ಹೀಗಾಗಿ ಅಡುಗೆ ಅನಿಲ ಸಮಸ್ಯೆ ತೀವ್ರಗೊಂಡಿದೆ ಎಂದು ಹೇಳಲಾಗಿದೆ.
ಪ್ರವಾಹ ನಿಂತು ತಿಂಗಳಾದರೂ ಗ್ರಾಹಕರಿಗೆ ಮಾತ್ರ ಮನೆ ಬಳಕೆಗೆ ಅಡುಗೆ ಅನಿಲ ಸಿಗುತ್ತಿಲ್ಲ. ಆದರೆ ಸಿಲಿಂಡರ್ ಸಮಸ್ಯೆಯಿಂದ ಕೆಲವು ಹೋಟೆಲ್ಗಳು ಬಾಗಿಲು ಮುಚ್ಚಿವೆ.