Advertisement

ನಿನ್ನ ಉತ್ತರಕ್ಕಾಗಿ 15 ದಿನ ಕಾಯ್ತೇನೆ…

09:07 AM May 22, 2019 | Sriram |

ನಿನ್ನ ಪ್ರೇಮ ನನ್ನ ಬಾಳಿನಲ್ಲಿ ಹೊಂಬೆಳಕನ್ನು, ನವ ಚೈತನ್ಯವನ್ನು ತುಂಬುತ್ತದೆಂದು ಅಂದುಕೊಂಡಿದ್ದೆ. ಅದುವೇ ಬದುಕಿಗೆ ಮುಳ್ಳಾಗಬಹುದೆಂಬ ಕಲ್ಪನೆ ಕನಸಿನಲ್ಲಿಯೂ ಹುಟ್ಟಿರಲಿಲ್ಲ.

Advertisement

ನನಗೀಗಲೂ ನಿನ್ನ ನೆನಪಿದೆ. ಆದರೆ, ಬರುಬರುತ್ತಾ ನಿನಗೆ ನನ್ನ ನೆನಪು ಕಡಿಮೆಯಾಗುತ್ತಿದೆಯೇನೋ ಎಂಬ ಹೆದರಿಕೆ ಶುರುವಾಗಿದೆ. ನಿನ್ನ ನಡವಳಿಕೆಗಳು ನೂರಾರು ಅನುಮಾನದ ಅಲೆಗಳನ್ನು ಸೃಷ್ಟಿಸಿವೆ. ನಂಬಿಕೆಯ ಗೋಪುರ ಸಂಶಯವೆಂಬ ಸುಂಟರಗಾಳಿಯ ಸುಳಿಗೆ ಸಿಲುಕಿ ನೆಲಕಚ್ಚುವ ಸ್ಥಿತಿ ತಲುಪಿದೆ. ನಿನ್ನ ಒಲವಿನ ಅರಮನೆಯಲ್ಲಿ ರಾಣಿಯಾಗಿ ಮೆರೆಯಬೇಕೆಂಬ ನನ್ನಾಸೆಯನ್ನು ಮಣ್ಣು ಪಾಲು ಮಾಡಲು ಯೋಚಿಸುತ್ತಿದ್ದೀಯ?

“ಪ್ರೀತಿ ಕುರುಡು’ ಎನ್ನುವ ಮಾತನ್ನು ಕೇಳಿದ್ದೆ. ಆದರೆ, ನನ್ನ ಬಾಳಿನಲ್ಲಿ ಆ ಮಾತು ನಿಜವಾಗುತ್ತದೆ ಅಂತ ನಾನು ಭಾವಿಸಿರಲಿಲ್ಲ. ನಿನ್ನ ಪ್ರೇಮ ನನ್ನ ಬಾಳಿನಲ್ಲಿ ಹೊಂಬೆಳಕನ್ನು, ನವ ಚೈತನ್ಯವನ್ನು ತುಂಬುತ್ತದೆಂದು ಅಂದುಕೊಂಡಿದ್ದೆ. ಅದುವೇ ಬದುಕಿಗೆ ಮುಳ್ಳಾಗಬಹುದೆಂಬ ಕಲ್ಪನೆ ಕನಸಿನಲ್ಲಿಯೂ ಹುಟ್ಟಿರಲಿಲ್ಲ.

ಪ್ರಾರಂಭದಲ್ಲಿ ಪ್ರಣಯದ ನೌಕೆ ಏರುವಾಗ ನೀನಾಡಿದ ಮಾತು ನೆನಪಿದೆಯೇ? “ಉಸಿರಿರುವವರೆಗೆ ಜಂಟಿಯಾಗಿರೋಣ’ ಅಂತ ಹೇಳಿದ್ದೆ. ಆದರೀಗ, ನನ್ನನ್ನು ಒಂಟಿ ಮಾಡಲು ಹೊರಟಿರುವುದೇಕೆ? ಅಂದು ನೀನಾಡಿದ ಸಿಹಿ ನುಡಿಗಳು, ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳು, ಪ್ರತಿ ನಿಮಿಷವೂ ನೀನು ನನಗಾಗಿ ಹಂಬಲಿಸುತ್ತಿದ್ದ ಆ ಪರಿ ಇಂದು ನನ್ನ ಜೀವ ಹಿಂಡುತ್ತಿದೆ. ಮತ್ತೆ ನೀನು ಮೊದಲಿನ ಹಾಗಾಗು ಎಂದು ಮನಸ್ಸು ಪ್ರಾರ್ಥಿಸುತ್ತಿದೆ.

ಎಳೆ ಮಗುವಿನ ಮನದಾಳದಲ್ಲಿ ಮೂಡಿದ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರಿಸಬಹುದು. ಹಠ ಮಾಡಿದರೆ ಮುದ್ದು ಮಾಡಿ, ಮರುಳು ಮಾಡಬಹುದು. ಆದರೆ, ಪ್ರೀತಿಗೆ ಬಿದ್ದ ಮನಸ್ಸಿದೆಯಲ್ಲ, ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಮಗುವಿಗಿಂತಲೂ ಮನಸ್ಸಿಗೆ ಹಠ ಜಾಸ್ತಿ. ನನ್ನದೇ ಮನಸ್ಸನ್ನು ನನಗೆ ಸಂಭಾಳಿಸುವುದು ಕಷ್ಟವಾಗಿದೆ.

Advertisement

ನಿನಗೆ ನನ್ನ ಜೊತೆ ಮಾತನಾಡದೆ, ನನ್ನನ್ನು ನೋಡದೆ ಇರಲು ಹೇಗಾದರೂ ಸಾಧ್ಯ? ಮೊದಲೆಲ್ಲ ನಾನು ಬೇಕೆಂದು ಹಠ ಹಿಡಿಯುತ್ತಿದ್ದ ನಿನ್ನ ಮನಸ್ಸು ಈಗ ನನ್ನನ್ನು ಮರೆತುಬಿಟ್ಟಿದೆಯಾ? ಆ ಮರೆವನ್ನು ನನಗೂ ಕಲಿಸಿಕೊಡಲು ನೀನೇ ಬರಬೇಕಿದೆ.

ನಾನು ನಿನ್ನ ಮುಂದೆ ನಿಂತಾಗ, ನೋಡಿದರೂ ನೋಡದ ಹಾಗೆ ಹೋಗುತ್ತೀಯಲ್ಲಾ ಆ ಕಾರಣಕ್ಕೇ ಈ ಪತ್ರ ಬರೆದಿರುವುದು. ಇದನ್ನು ಓದಿದ ಮೇಲಾದರೂ ನನ್ನೆಡೆಗೆ ಬರುವೆಯೇನೋ ಎಂಬ ಸಣ್ಣ ಆಸೆಯೊಂದು ಇನ್ನೂ ಎದೆಯಲ್ಲಿ ಜೀವಂತವಾಗಿದೆ. ನನ್ನ ನಂಬಿಕೆಯನ್ನು ಹುಸಿ ಮಾಡಬೇಡ. ನಿನ್ನ ಉತ್ತರಕ್ಕಾಗಿ ಹದಿನೈದು ದಿನ ಕಾಯುತ್ತೇನೆ.
ಸರೀನಾ?
ನಿನ್ನದೇ ನಿರೀಕ್ಷೆಯಲ್ಲಿರುವ

-ನಾಗರತ್ನ ಮತ್ತಿಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next