ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಟೆಂಡರ್ ಶ್ಯೂರ್ ಯೋಜನೆಯ ಕಾಮಗಾರಿಗಳಲ್ಲಿ ಅನುದಾನ ದುರುಪ ಯೋಗವಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಅಭಿಯಂತರ ಕ್ಯಾಪ್ಟನ್ ಆರ್.ಆರ್.ದೊಡ್ಡಿಹಾಳ್ ಅಧ್ಯ ಕ್ಷತೆಯಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿ ಯರ್ ಅಧ್ಯಕ್ಷರಾದ ಡಾ. ಎಂ.ಯು. ಅಶ್ವಥ್, ಪ್ರೊ. ಎಚ್.ಎಸ್.ಜಗದೀಶ್, ನಿವೃತ್ತ ಕಾರ್ಯಪಾಲಕ ಅಭಿ ಯಂತರ ಬಸವರಾಜ ಎನ್.ಸಂಶಿಮಠ, ನಿವೃತ್ತ ಅಧೀಕ್ಷಕ ಅಭಿಯಂತರ ಎ.ನಾಗೇಂದ್ರ ಅವರು ಸದಸ್ಯರಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಆಯ್ದ ಕೆಲ ರಸ್ತೆಗಳನ್ನು ಅಂತಾರಾಷ್ಟ್ರೀಯ ದರ್ಜೆ ರಸ್ತೆಗಳನ್ನಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಟೆಂಡರ್ ಶ್ಯೂರ್ ಯೋಜನೆಯಡಿ ಮೊದಲ ಹಂತದಲ್ಲಿ 12 ಹಾಗೂ ಎರಡನೇ ಹಂತದಲ್ಲಿ 13 ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದು, ಜತೆಗೆ, ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲು 2016-17 ರಲ್ಲಿ 800 ಕೋಟಿ ರೂ. ಅನುದಾನ ಮತ್ತು 2017-18 ರಲ್ಲಿ 690 ಕೋಟಿ ರೂ.ಅನುದಾನ ಒದಗಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಮೂರನೇ ಹಂತದ ವೈಟ್ ಟಾಪಿಂಗ್ ಯೋಜನೆಯ ಬಗ್ಗೆಯೂ ಆರೋಪಗಳು ಇವೆ. ಹೀಗಾಗಿ, ಅನುದಾನದಲ್ಲಿ ದುರುಪಯೋಗ ಆಗಿದೆ ಎಂದು ಆರೋಪಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹದಿನೈದು ದಿನಗಳಲ್ಲಿ ವರದಿ ನೀಡಲು ಸಮಿತಿಗೆ ಕಾಲಾವಕಾಶ ನೀಡಲಾಗಿದ್ದು, ಕಾಮಗಾರಿ ಗುಣಮಟ್ಟ, ಅನುದಾನ ದುರುಪಯೋಗ, ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ನಗರಕ್ಕೆ ಅಗತ್ಯವೇ? ಪರ್ಯಾಯ ಮಾರ್ಗಗಳು ಇವೆಯೇ? ಕಾಮಗಾರಿ ಗುಣನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳೇನು ಎಂಬುದರ ಬಗ್ಗೆಯೂ ವರದಿಯಲ್ಲಿ ತಿಳಿಸುವಂತೆ ಸೂಚಿಸಲಾಗಿದೆ.