ಚಿತ್ರದುರ್ಗ: ನಗರದಲ್ಲಿ ಸುರಿದಿರುವ ಹಳೆಯ ಮನೆಗಳ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛಗೊಳಿಸಲು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಅಧಿಕಾರಿಗಳಿಗೆ 15 ದಿನ ಗಡುವು ನೀಡಿದ್ದಾರೆ.
ಸುಮಾರು ಏಳೆಂಟು ಸಾವಿರ ಲೋಡ್ ಮನೆಯ ತ್ಯಾಜ್ಯವನ್ನು ಚಂದ್ರವಳ್ಳಿ, ಎಸ್‌ಜೆಎಂ ಕಾಲೇಜು ಬಳಿ ಸುರಿಯಲಾಗಿದೆ. ಹೀಗೆ ಬಿಟ್ಟರೆ ಕನಕ ವೃತ್ತದವರೆಗೂ ಸುರಿಯುತ್ತಾರೆ. ಮಣ್ಣು ತಂದು ಸುರಿಯುವವರ ಮೇಲೆ ಪ್ರಕರಣ ದಾಖಲಿಸುವಂತೆ ತಿಳಿಸಿದರು.
ಪರಿಸರ ಇಂಜಿನಿಯರ್‌ಗೆ ನಗರದ ಸ್ವಚ್ಛತೆ ಗಮನಿಸಲು ಕಾರು ಹಾಗೂ ಆರು ಜನ ಸಹಾಯಕರನ್ನು ಕೊಡಲಾಗಿದೆ. ಆದರೆ ಎಲ್ಲರೂ ಏನು ಮಾಡುತ್ತಿದ್ದಿರಿ, ಬರೀ ಹೋಟೆಲ್ ಸ್ವಚ್ಛತೆ ನೋಡಿಕೊಂಡು ಮಜಾ ಮಾಡುತ್ತಿದ್ದಿರಾ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು, ಮುಂಬೈ ನಗರಗಳಲ್ಲಿ ಈ ರೀತಿಯ ತ್ಯಾಜ್ಯದ್ದೇ ದೊಡ್ಡ ತಲೆನೋವಾಗಿದೆ. ಹೀಗಿದ್ದೂ ನೀವು ಆರಾಮಾಗಿದ್ದಿರಿ. 15 ದಿನದಲ್ಲಿ ಎಲ್ಲವೂ ಕ್ಲೀನ್ ಆಗದಿದ್ದರೆ ಡಿಸಿಗೆ ಹೇಳಿ ರಿಲೀವ್ ಮಾಡಿಸುತ್ತೇನೆ ಎಂದು ಎಚ್ಚರಿಸಿದರು.
Advertisement
ಸೋಮವಾರ ನಗರಸಭೆ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಳಲ್ಕೆರೆ ರಸ್ತೆ ಸೇರಿದಂತೆ ಹಲವೆಡೆ ಸುರಿದಿರುವ ಮನೆಗಳ ತ್ಯಾಜ್ಯವನ್ನು ತಕ್ಷಣ ತೆರವು ಮಾಡಬೇಕು ಎಂದು ಪರಿಸರ ಇಂಜಿನಿಯರ್ ಜಾಫರ್ ಅವರಿಗೆ ಸೂಚಿಸಿದರು.
Related Articles
Advertisement
ಬೀದಿದೀಪ ನಿರ್ವಹಣೆಗೆ 48 ಲಕ್ಷ ರೂ.!: ನಗರದಲ್ಲಿರುವ ಸುಮಾರು 7100 ಬೀದಿದೀಪಗಳ ನಿರ್ವಹಣೆಗೆ ಬೆಂಗಳೂರು ಮೂಲದ ವ್ಯಕ್ತಿಗೆ ತಿಂಗಳಿಗೆ 4 ಲಕ್ಷದಂತೆ ವರ್ಷಕ್ಕೆ 48 ಲಕ್ಷ ರೂ. ಪಾವತಿ ಮಾಡುತ್ತಿರುವುದನ್ನು ಕೇಳಿ ಶಾಸಕರು ಅಚ್ಚರಿ ವ್ಯಕ್ತಪಡಿಸಿದರು.
ಇಲ್ಲಿ ದುಡ್ಡು ಸೋರಿ ಹೋಗುತ್ತಿದೆ. ಲೂಟಿ ಹೊಡೆಯುತ್ತಾ ಇದಾರೆ. ಲೈಟ್‌ಗಳು ಹಾಳಾಗಿದ್ದರೆ ಹೊಸ ಬಲ್ಭ್ ಅಳವಡಿಸಿದಾಗ ಹೆಚ್ಚು ಖರ್ಚು ಬರಬಹುದು. ಆದರೆ ಬಲ್ಭುಗಳು ಹಾಳಾಗದಿದ್ದರೂ ಅಷ್ಟೇ ಹಣ ಕೊಡುವುದು ಸರಿಯಲ್ಲ. ನಗರದ ಹಲವೆಡೆ ಬೀದಿದೀಪಗಳು ಬೆಳಗುತ್ತಿಲ್ಲ. ನಮ್ಮ ಮನೆಯ ರಸ್ತೆಯಲ್ಲಿ ಲೈಟ್ ಕೆಟ್ಟು 6 ತಿಂಗಳಾಗಿದೆ. ಹೀಗಿದ್ದು ತಿಂಗಳಿಗೆ 4 ಲಕ್ಷ ರೂ. ಯಾಕೆ ಕೊಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಬೀದಿದೀಪ ನಿರ್ವಹಣೆಗೆ 2 ವಾಹನ, 6 ಜನ ಕೆಲಸಗಾರರು ಎಲ್ಲಾ ಸೇರಿ 2 ಲಕ್ಷ ಖರ್ಚು ಬಂದರೆ ಹೆಚ್ಚು. ಅಂಥದ್ದರಲ್ಲಿ ಪ್ರತಿ ತಿಂಗಳು 2 ಲಕ್ಷ ರೂ. ಹೆಚ್ಚು ಹಣ ಕೊಡಲಾಗುತ್ತಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ವಿವರವಾಗಿ ಚರ್ಚಿಸಲು ಸಂಬಂಧಪಟ್ಟ ಅಗ್ರಿಮೆಂಟ್ ಹಾಗೂ ಗುತ್ತಿಗೆದಾರರನ್ನು ಕರೆಸುವಂತೆ ತಿಳಿಸಿದರು.
ನಗರದಲ್ಲಿ ನೀರು ಬಿಡುವ ಆಪರೇಟರ್‌ಗಳಿಗೆ 8 ತಿಂಗಳಿಂದ ವೇತನ ನೀಡಿಲ್ಲ ಎಂಬ ವಿಷಯ ಕೇಳಿ ಸಿಡಿಮಿಡಿಗೊಂಡ ಶಾಸಕರು, ಅವರು ಉಪವಾಸ ಇರಬೇಕಾ, ಅವರ ಮಕ್ಕಳು ಶಾಲೆಗೆ ಹೋಗೋದು ಬೇಡವಾ, ತಕ್ಷಣ ವೇತನ ನೀಡಿ ಎಂದು ತಾಕೀತು ಮಾಡಿದರು.
ನಗರಸಭೆ ಪೌರಾಯುಕ್ತ ಚಂದ್ರಪ್ಪ, ನಗರಸಭೆ ಸದಸ್ಯರಾದ ಶಶಿ, ನವೀನ್ ಚಾಲುಕ್ಯ ಮತ್ತಿತರರು ಇದ್ದರು.
ಯೂನಿಯನ್ ಪಾರ್ಕ್ ನಿರ್ವಹಣೆಗೆ ಅಸಮಾಧಾನ:
ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ ಪಾರ್ಕ್‌ಗಳ ಸುವ್ಯವಸ್ಥೆಗೆ ಕೋಟ್ಯಂತರ ರೂ. ಹಣ ನೀಡಿದೆ. ಆದರೆ ಯೂನಿಯನ್ ಪಾರ್ಕ್‌ನಲ್ಲಿ ಕಾರು, ಟ್ಯಾಕ್ಸಿ ನಿಲ್ಲುತ್ತಿವೆ. ದನಗಳು ಮಲಗಿರುತ್ತವೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಪಾರ್ಕ್‌ನಲ್ಲಿ ಹಾಕಿರುವ ಗ್ರಾಸ್ ಕೂಡಾ ಸರಿಯಾಗಿಲ್ಲ ಎಂದರು. ಯುಜಿಡಿ ಕಾಮಗಾರಿಗಾಗಿ ಕೆಯುಡಬ್ಲ್ಯೂಎಸ್ 80 ಕೋಟಿ ರೂ. ಕೊಟ್ಟು 8 ವರ್ಷವಾದರೂ ಕೆಲಸ ಮುಗಿದಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್‌ಗೆ 112 ಕೋಟಿ ರೂ. ಕೊಡಲಾಗಿದೆ. ಆದರೂ ಸರಿಯಾಗಿ ಕೆಲಸ ಆಗಿಲ್ಲ. ಪೈಪ್‌ಲೈನ್‌ಗೆ ರಸ್ತೆ ಅಗೆದಾಗ ತಕ್ಷಣ ರಿಪೇರಿ ಮಾಡಲು 13 ಕೋಟಿ ರೂ. ಇದೆ. ಆದರೆ ರಸ್ತೆಗಳು ಎಲ್ಲಿಯೂ ರಿಪೇರಿ ಆಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.