Advertisement

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

01:08 AM May 05, 2024 | Team Udayavani |

ಬೆಳ್ತಂಗಡಿ: ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರೇರೇಪಿಸಲು ಹಾಗೂ ಜಾಗೃತಿ ಮೂಡಿಸಲು ಜಿಲ್ಲಾಡಳಿತದಡಿ ಸ್ವೀಪ್‌ ಸಮಿತಿಗಳು ಕಾರ್ಯ ನಿರ್ವಹಿಸಿದರೂ ಈ ಬಾರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಮನಾರ್ಹ ಹೆಚ್ಚಳ ಆಗಿಲ್ಲ. ಈ ಹಿನ್ನೆಲೆಯಲ್ಲಿ ಬರೀ ಜಾಗೃತಿಯಲ್ಲ; ಮತ ಪಟ್ಟಿಯಿಂದ ಹಿಡಿದು ಹಲವು ಹಂತಗಳಲ್ಲಿನ ಲೋಪಗಳು ಮತದಾರರನ್ನು ನಿರಾಶೆಗೊಳಿಸುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.

Advertisement

ಎ. 26 ರಂದು ಮತದಾನ ನಡೆದ 13 ರಾಜ್ಯಗಳಲ್ಲೂ ಸರಾಸರಿ ಶೇ. 60 ರಷ್ಟು ಮತದಾನವಾಗಿದೆ. ಚುನಾವಣೆ ದಿನ ಘೋಷಣೆಯಾಗುತ್ತಲೇ ಆಯಾ ರಾಜ್ಯಗಳಲ್ಲಿ ಸ್ವೀಪ್‌ ಸಮಿತಿಗಳು ಕಾರ್ಯಾರಂಭಿಸುತ್ತವೆ. ಈ ಬಾರಿ ಚುನಾವಣೆಗೆ ಚುನಾವಣಾ ಆಯೋಗವು ಸ್ವೀಪ್‌ ಸಮಿತಿಗೆ ಪ್ರತಿ ತಾಲೂಕಿಗೆ 3 ಲಕ್ಷ ರೂ. ನಂತೆ ರಾಜ್ಯದ 223 ತಾಲೂಕುಗಳಿಗೆ 6.69 ಕೋಟಿ ರೂ. ವ್ಯಯಿಸಿದೆ. ಇದಲ್ಲದೇ ಗ್ರಾ.ಪಂ., ತಾ.ಪಂ. ಜಿಲ್ಲಾ ಮಟ್ಟದ ಸಭೆಗಳಿಗೆ ಹಾಜರಾಗಲು, ಸಿಬಂದಿ ಸಾಗಾಟಕ್ಕೆ ಡೀಸೆಲ್‌ ಖರ್ಚು ವೆಚ್ಚ, ಊಟ, ಉಪಹಾರ ಇತರ ಖರ್ಚು ಸೇರಿ ಪ್ರತಿ ರಾಜ್ಯ 15 ರಿಂದ 20 ಕೋಟಿ ರೂ. ಗಳನ್ನು ವ್ಯಯಿಸುತ್ತಿದೆ. ಆದರೂ ಮತದಾನ ಹೆಚ್ಚಳವಾಗದ್ದಕ್ಕೆ ಮತದಾರರ ಪಟ್ಟಿ ಸರಿಯಾದ ರೀತಿಯಲ್ಲಿ ಆಗದಿರುವುದೂ ಪ್ರಮುಖ ಕಾರಣ ಎನ್ನಲಾಗಿದೆ.

ಪಟ್ಟಿ ಪರಿಷ್ಕರಣೆ
ಮತ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ ಆಗದಿರುವುದು ಹೊಸ ದೂರಲ್ಲ. ಹಾಗಾಗಿ ಒಬ್ಬ ಮತದಾರ ಮೃತಪಟ್ಟರೂ ಪಟ್ಟಿಯಲ್ಲಿ ಹೆಸರಿರುತ್ತದೆ. ಇನ್ನು ಕೆಲವೆಡೆ ಹಿಂದಿನ ಚುನಾವಣೆಗೆ ಮತ ಹಾಕಿದವರಿಗೆ ಈ ಬಾರಿ ಪಟ್ಟಿಯಲ್ಲಿ ಹೆಸರಿರದು. ಇನ್ನೂ ಕೆಲವರಿಗೆ ಕ್ಷೇತ್ರದಲ್ಲೇ ಇದ್ದರೂ ಮತ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿಲ್ಲ. ಪ್ರತಿ ಬಾರಿಯೂ ವೋಟರ್‌ ಐಡಿ ಹಿಡಿದು ಮತಗಟ್ಟೆಗೆ ಹೋಗಿ ಹೆಸರಿಲ್ಲ ಎಂದುಕೊಂಡು ಬರುವ ಮತದಾ‌ರರ ಸಂಖ್ಯೆಯೂ ಕಡಿಮೆಯಾಗಿಲ್ಲ. ಇವೆಲ್ಲದರ ಮಧ್ಯೆ ಮತದಾರನ ವಯಸ್ಸು 85 ಕಳೆದರೂ ಪಟ್ಟಿಯಲ್ಲಿ 20 ವರ್ಷ ಎಂದಿರುತ್ತದೆ. ಇವೆಲ್ಲವೂ ಉತ್ಸಾಹಿ ಮತದಾರರ ಉತ್ಸಾಹವನ್ನೂ ಕುಗ್ಗಿಸುವಂತೆ ಮಾಡುತ್ತಿದೆ.

ಯಾವುದೇ ಮತದಾರ ಮರಣವಾದ ವಾರದೊಳಗೆ ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಆಯಾ ಮತಗಟ್ಟೆ ಅಧಿಕಾರಿ ಅಥವಾ ಮತ ಪಟ್ಟಿ ಪರಿಷ್ಕರಣೆ ವಿಭಾಗ (ಚುನಾವಣೆ) ಗೆ ಆಯಾ ವ್ಯಕ್ತಿಯ ಸಂಬಂಧಿಕರು ನೀಡಿ ಸಹಿ ಪಡೆಯಬೇಕು. ಒಂದು ಮತಗಟ್ಟೆ ವ್ಯಾಪ್ತಿಯಲ್ಲಿ ಕನಿಷ್ಠ 6 ತಿಂಗಳು ವಾಸವಿಲ್ಲದಿದ್ದರೆ ವಾಸ್ತವ್ಯ ಬದಲಿಸಿದ ವ್ಯಕ್ತಿಯ ಹೆಸನ್ನು ಮತದಾರರ ಪಟ್ಟಿಯಿಂದ ಸೂಕ್ತ ಕಾರಣ ಪಡೆದು ರದ್ದುಪಡಿಸಬೇಕು. ಇದನ್ನು 3 ತಿಂಗಳಿಗೊಮ್ಮೆ ಬಿಎಲ್‌ಒಗಳ ಸಭೆ ನಡೆಸಿ ತಹಶೀಲ್ದಾರ್‌ ಹಾಗೂ 6 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಮೂಲಕ ಪ್ರಗತಿ ಪರಿಶೀಲನೆ ನಡೆಸಬೇಕು. ಇವೆಲ್ಲವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಡಬಲ್‌ ಎಂಟ್ರಿ
ಒಂದೇ ಪಟ್ಟಿಯಲ್ಲಿ ಒಬ್ಬನ ಹೆಸರು ಎರಡು ಬಾರಿ ನಮೂದಾಗಿರುತ್ತದೆ. ಒಬ್ಬರಿಗೆ ಬೇರೆ ಜಿಲ್ಲೆ, ಬೇರೆ ರಾಜ್ಯದಲ್ಲಿ ಆಸ್ತಿ ಹೊಂದಿರುತ್ತಾರೆ. ಅವರು ಅಲ್ಲೂ ಹಕ್ಕು ಪಡೆದಿರುತ್ತಾರೆ. ಇಂಥ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಬೇಕಿದೆ. ಎಲ್ಲ ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಮಾಡಿ ಡಬಲ್‌ ಎಂಟ್ರಿ ಇದ್ದವರ ವಿವರ ತೆಗೆದು ಒಂದೇ ಕಡ ಮತದಾನ ಹಕ್ಕನ್ನು ನೀಡಬೇಕು ಎಂಬುದು ಹಲವರ ಅಭಿಪ್ರಾಯ.

Advertisement

ಲೋಕಸಭೆ ಚುನಾವಣೆ ಬಜೆಟ್‌
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024 ರ ಮಧ್ಯಂತರ ಬಜೆಟ್‌ನಲ್ಲಿ ಚುನಾವಣಾ ವೆಚ್ಚಕ್ಕಾಗಿ 2,442.85 ಕೋಟಿ ರೂ ಘೋಷಿಸಿದ್ದರು. ಇದರಲ್ಲಿ ಲೋಕಸಭೆ ಚುನಾವಣೆ ನಡೆಸಲು 1000 ಕೋಟಿ ರೂ. ಖರ್ಚು. ಅಲ್ಲದೆ ಮತದಾರರ ಗುರುತಿನ ಚೀಟಿ ಹಂಚಿಕೆಗಾಗಿ 404.81 ಕೋಟಿ ಮೀಸಲಿಟ್ಟಿದ್ದರು. ಇವಿಎಂಗೆ ಬಜೆಟ್‌ನಲ್ಲಿ 34.84 ಕೋಟಿ ರೂ. ನಿಗದಿಪಡಿಸಲಾಗಿದೆ. ಒಟ್ಟಾರೆ 2024ರ ಲೋಕಸಭಾ ಚುನಾವಣೆಗೆ 2040 ಕೋಟಿ ರೂ. ಮೀಸಲಿಡಲಾಗಿದೆ.

ಪ್ರಯೋಜನವಾಗುತ್ತಿದೆಯೇ?
ಇತ್ತೀಚಿನ ಚುನಾವಣೆಗಳಲ್ಲಿ ಸ್ವೀಪ್‌ ಸಮಿತಿಯ ಸದಸ್ಯರೂ ಸಹ ಮತದಾನದ ಕುರಿತು ಜಾಗೃತಿ ಎಂದು ಸ್ಕೂಬಾ ಡೈವಿಂಗ್‌, ಬೋಟಿಂಗ್‌ ಮತ್ತಿತರ ಸಾಹಸಮಯ ಕ್ರೀಡೆಗಳಲ್ಲಿ ತೊಡಗುತ್ತಿರುವ ಪ್ರಸಂಗಗಳು ಹೆಚ್ಚಾಗಿವೆ. ಸರ್ಫಿಂಗ್‌ ಇತ್ಯಾದಿ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ, ವೀಡಿಯೋ ಹಂಚಿಕೊಂಡು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಯಾವ ರೀತಿಯ ಜಾಗೃತಿ ಮೂಡುತ್ತದೋ ಎಂಬುದು ಮತದಾರರ ಪ್ರಶ್ನೆ. ಇದರ ಬದಲಾಗಿ ಅನುಷ್ಠಾನ ಹಾಗೂ ಪರಿಣಾಮ ಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಅದಾಗದ ಹೊರತು ಇಂಥ ಪ್ರಯತ್ನಗಳು ವ್ಯರ್ಥ ಎಂಬುದು ಹಲವು ಅಭಿಪ್ರಾಯ.

ವಿದೇಶ ಪೌರತ್ವ
ಬಹುತೇಕ ಮಂದಿ ವಿದೇಶದಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆಯುತ್ತಾರೆ. ಆದರೆ ಅವರ ಹೆಸರು ಇಲ್ಲಿಯ ಮತ ಪಟ್ಟಿಯಲ್ಲೂ ಇರುತ್ತದೆ. ಮತದಾನಕ್ಕೆ ಬಾರದ ಇಂಥವರ ಬಗ್ಗೆ ಭಾರತೀಯ ರಾಯಭಾರ ಕಚೇರಿಯಿಂದ ಪಟ್ಟಿ ತರಿಸಿ ಮತದಾರರ ಪಟ್ಟಿ ಪರಿಷ್ಕರಿಸಬೇಕು. ಇಲ್ಲದಿದ್ದಲ್ಲಿ ವಿದೇಶದಲ್ಲಿ ಕನಿಷ್ಠ 3 ಮತದಾನದಲ್ಲಿ ಪಾಲ್ಗೊಳ್ಳುವ ಕಡ್ಡಾಯ ಕಾನೂನು ಮಾಡಬೇಕಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಕಾಲ
-ಮೃತಪಟ್ಟವರ ಹೆಸರು ತೆರವು
-ಡಬಲ್‌ ಎಂಟ್ರಿ ತೆರವು
-ವಲಸೆ ಕಾರ್ಮಿಕರ ಮೇಲೆ ನಿಗ
-ವಿದೇಶಿಗರ ಪ್ರತ್ಯೇಕ ಓಟರ್‌ ಪಟ್ಟಿ
-ಬಿಎಲ್‌ಒಗಳಿಗೆ ತರಬೇತಿ, ಸವಲತ್ತು

ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣೆಗೆ ಮುನ್ನವೇ ಬಹಳಷ್ಟು ಹಂತಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ನಡೆಯುತ್ತದೆ. ಶೇಕಡವಾರು ಮತದಾನ ಹೆಚ್ಚಳವಾಗದರಿಲು ಪಟ್ಟಿ ಪರಿಷ್ಕರಣೆಯೂ ಒಂದು ಕಾರಣ ಎನಿಸಬಹುದು. ಇದು ಮತಗಟ್ಟೆ ಅಧಿಕಾರಿಗಳ ಹಂತದಿಂದಲೇ ಆಗಬೇಕಿದ್ದು,. ನಾನಾ ಕಾರಣಗಳಿಂದ ಏರಿಕೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಮತಗಟ್ಟೆ ಲೊಕೇಶ್‌ನ್‌ ತಲುಪಲು ಕ್ಯುಆರ್‌ ಕೋಡ್‌ನ್ನು ನೀಡಲಾಗಿತ್ತು. ಮುಂದೆ ಈ ಕುರಿತು ಆಯೋಗ ಗಮನ ಹರಿಸಲಿದೆ.
– ಕೂರ್ಮಾ ರಾವ್‌, ಸಹಾಯಕ ಆಯುಕ್ತರು, ರಾಜ್ಯ ಚುನಾವಣಾ ಆಯೋಗ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next