ಬೆಂಗಳೂರು: ಕೋವಿಡ್ 19 ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದ 15 ಜನ ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಕೋವಿಡ್ 19 ಸಂಕಷ್ಟದ ಪರಿಸ್ಥಿತಿಯಲ್ಲೂ ಕಸ ವಿಲೇವಾರಿಯಲ್ಲಿ ಯಾವುದೇ ಲೋಪವಾಗದಂತೆ ಪೌರಕಾರ್ಮಿಕರು ಕೆಲಸ ಮಾಡಿದ್ದರು. ಲಾಕ್‌ಡೌನ್‌ನಲ್ಲೂ ಕೆಲಸಕ್ಕೆ ಹಾಜರಾಗಿದ್ದರು. ಹೀಗಾಗಿ ತ್ಯಾಜ್ಯ ಸಮಸ್ಯೆ ನಗರದಲ್ಲಿ ಉಲ್ಬಣಿಸಿರಲಿಲ್ಲ.
ಆದರೆ, ಕೆಲಸಕ್ಕೆ ಹಾಜರಾದ ಪೌರ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಸೋಂಕಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಪೌರಕಾರ್ಮಿಕರೊಬ್ಬರು ಸೊಂಕಿನಿಂದ ಮೃತಪಟ್ಟಿದ್ದು, ಸಂಪರ್ಕದಲ್ಲಿದ್ದ 94 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 15 ಮಂದಿಗೆ ಸೋಂಕು ದೃಢಪಟ್ಟಿತ್ತು. ಸೋಂಕಿತರು ದೀಪಾಂಜಲಿ ನಗರ ಹಾಗೂ ಸುಂಕೇನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು.
ಬಹುತೇಕ ಮಂದಿ ಪಾದರಾಯನಪುರ ಹಾಗೂ ಗೋರಿಪಾಳ್ಯದಲ್ಲಿ ನೆಲೆಸಿದ್ದರು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 23 ಪೌರಕಾರ್ಮಿಕರು, ಸಂಪರ್ಕಿತರನ್ನೂ ಕ್ವಾರಂಟೈನ್ ಮಾಡ ಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಬ್ಬ ಪೌರಕಾರ್ಮಿಕರು ಮೃತಪಟ್ಟು, 15 ಜನ ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಪಾಲಿಕೆ ಅಗತ್ಯ ಮುಂಜಾಗ್ರತಾ ಕ್ರಮ, ನಿರ್ದಿಷ್ಟ ಮಾರ್ಗಸೂಚಿ ಅಳವಡಿಕೆಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹಿಂದೆಯೂ ಸೀಲ್‌ಡೌನ್ ಹಾಗೂ ಕಂಟೈನ್ಮೆಂಟ್ ಝೊನ್‌ಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ದೂರುಗಳು ಕೇಳಿ ಬಂದಿದ್ದವು. ನಗರದಲ್ಲಿ ಕಂಟೈನ್ಮೆಂಟ್ ಝೊನ್‌ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಈ ಸಂದರ್ಭದಲ್ಲಿಯೂ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದೆ ಪೌರಕಾರ್ಮಿಕರಿಗೆ ಸೋಂಕಿನ ಪ್ರಮಾಣ ಹೆಚ್ಚುವ ಆತಂಕ ಎದುರಾಗಿದ್ದು, ಅಗತ್ಯ ಕ್ರಮ, ನಿರ್ದಿಷ್ಟ ಯೋಜನೆ ರೂಪಿಸಬೇಕಾಗಿದೆ.
ನಗರದಲ್ಲಿ 15 ಜನ ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಎಲ್ಲ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ