ಕಾಗವಾಡ: ರಾಜ್ಯದ ಗಡಿ ತಾಲೂಕು ಕಾಗವಾಡದಲ್ಲಿ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಡಾ| ಪ್ರಭಾಕರ ಕೋರೆ ಸರ್ವಾಧ್ಯಕ್ಷತೆಯಲ್ಲಿ ಜ. 30 ಮತ್ತು 31 ರಂದು ಹಮ್ಮಿಕೊಳ್ಳಲಾಗಿದ್ದು, ಕೋವಿಡ್ ನಿಯಮಗಳ ಪಾಲನೆ ಮಾಡುತ್ತ ಸಮ್ಮೇಳನ ಯಶಸ್ವಿಗೊಳಿಸುತ್ತೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಗಳಾ ಮೆಟಗುಡ್ಡ ನುಡಿದರು.
ಸೋಮವಾರ ಶಿವಾನಂದ ಮಹಾವಿದ್ಯಾಲಯ ಸಭಾಭವನದಲ್ಲಿ ಗುರುದೇವಾಶ್ರಮದ ಪೀಠಾಧೀಶರಾದ ಯತೀಶ್ವರಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಸಿದ್ದಗೌಡ ಕಾಗೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಡಾ. ಪ್ರಭಾಕರ ಕೋರೆ ಅವರು ಆರು ತಿಂಗಳ ಹಿಂದೆಯೇ ಸಮ್ಮೇಳನವನ್ನುಉಗಾರದಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಿದ್ದರು.
ಆದರೆ, ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದೆವು. ಈಗ, ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಅನುಮತಿನೀಡಿದ್ದಾರೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ| ಪ್ರಭಾಕರ ಕೋರೆ ಅವರನ್ನು ಆಯ್ಕೆ ಮಾಡಿದ್ದೇವೆ. ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲ ಕನ್ನಡ ಅಭಿಮಾನಿಗಳು ಸಹಕರಿಸಿರಿ ಎಂದು ಕರೆ ನೀಡಿದರು.
ಕಾಗವಾಡ ತಾಲೂಕು ಕಸಾಪ ಅಧ್ಯಕ್ಷ ಡಾ. ಸಿದ್ದಗೌಡ ಕಾಗೆ ಮಾತನಾಡಿ, ಸಮ್ಮೇಳನವನ್ನು ಎಲ್ಲ ಕನ್ನಡ ಅಭಿಮಾನಿಗಳು ಒಂದುಗೂಡಿ ಯಶಸ್ವಿಗೊಳಿಸುತ್ತೇವೆಂದು ಭರವಸೆ ನೀಡಿದರು. ಅಥಣಿ ತಾಲೂಕು ಕಸಾಪ ಅಧ್ಯಕ್ಷ ಡಾ. ಮಹಾಂತೇಶ ಉಕಲಿ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನದ ರೂಪರೇಷೆ ಕುರಿತು ಜಿಲ್ಲಾ ಸಂಚಾಲಕ ಮಹಾಂತೇಶ ಮೆಣಸಿನಕಾಯಿ, ಜ್ಯೋತಿ ಬದಾಮಿ, ಸಿದ್ದರಾಮ ಮೋಟಗಿ, ಹೇಮಾ ಸೋನೊಳಿ, ಶಶಿಕಾಂತ ಯಲಗಾರ, ರಾಮದುರ್ಗ ತಾಲೂಕಾಧ್ಯಕ್ಷಪಾಂಡುರಂಗ ಜತ್ತನ್ನವರ, ಕಾಗವಾಡ ಬಿಇಓ ಮಲ್ಲಪ್ಪಾ ಮುಂಜೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಗಾರದ ಕನ್ನಡ ಯುವಕ ಸಂಘದ ವತಿಯಿಂದ ಡಾ. ಸಿದ್ದಗೌಡ ಕಾಗೆ 51 ಸಾವಿರ ರೂ. ದೇಣಿಗೆ ಘೋಷಣೆ ಮಾಡಿದರು. ಜ್ಯೋತಿಕುಮಾರ ಪಾಟೀಲ 20 ಸಾವಿರ ರೂ., ಬ್ರಾಹ್ಮಿಸುಂದರಿ ಸಂಸ್ಥೆಯಿಂದ 10 ಸಾವಿರ ರೂ. ಘೋಷಿಸಿದರು. ಶಿವಾನಂದ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಬಿ.ಎ.ಪಾಟೀಲ ವಂದಿಸಿದರು.