Advertisement

ಉಡುಪಿಯಿಂದ 1,460 ವಲಸೆ ಕಾರ್ಮಿಕರ ಯಾನ

01:48 AM May 18, 2020 | Sriram |

ಉಡುಪಿ: ಜಿಲ್ಲೆಯಿಂದ ಮೊದಲ ಶ್ರಮಿಕ್‌ ರೈಲು ರವಿವಾರ ಇಂದ್ರಾಳಿ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಹೊರಟಿತು. 1,460 ಮಂದಿ ವಲಸೆ ಕಾರ್ಮಿಕರು ರೈಲಿನಲ್ಲಿ ತೆರಳಿದರು. ಈ ರೈಲು ಉತ್ತರ ಪ್ರದೇಶ ಬಸ್ತಿ ನಿಲ್ದಾಣವನ್ನು ಮೇ 19ರ ಬೆಳಗ್ಗೆ 6.10ಕ್ಕೆ ತಲುಪಲಿದೆ. ಮಧ್ಯದಲ್ಲಿ ನಿಲುಗಡೆ ಇರುವುದಿಲ್ಲ.

Advertisement

ಮಧ್ಯಾಹ್ನ 2 ಗಂಟೆಗೆ ಇಂದ್ರಾಳಿ ರೈಲು ನಿಲ್ದಾಣದ ಹೊರಗೆ ತೆರೆದ ಕೌಂಟರ್‌ನಲ್ಲಿ ಟಿಕೆಟ್‌ ನೋಂದಣಿ ನಡೆಯಿತು. ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಇ-ಪಾಸ್‌ ಹೊಂದಿರುವ ಉತ್ತರ ಪ್ರದೇಶ ರಾಜ್ಯದ ಜನರು ಟಿಕೆಟ್‌ ಕೌಂಟರ್‌ಗಳಲ್ಲಿ ಟಿಕೆಟ್‌ ಪಡೆದುಕೊಂಡರು.

ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಪಾಸ್‌ ಪಡೆದಿರುವವರು ನೇರವಾಗಿ ನಿಲ್ದಾಣಕ್ಕೆ ಬಂದು ಟಿಕೆಟ್‌ ಪಡೆದು ರೈಲನ್ನೇರಿದರು. ಕಾರ್ಕಳದಿಂದ 236 ಮಂದಿ, ಕುಂದಾಪುರದಿಂದ 323 ಮಂದಿ ಉಳಿದಂತೆ ಕಾಪು, ಬ್ರಹ್ಮಾವರ ಸೇರಿ ಉಡುಪಿ ಯುನಿಟ್‌ನಲ್ಲಿ 901 ಮಂದಿ ಇದ್ದರು. ಒಬ್ಬರಿಗೆ ತಲಾ 910 ರೂ. ಪ್ರಯಾಣ ದರ ನಿಗದಿಪಡಿಸಲಾಗಿತ್ತು. ಕುಂದಾಪುರ ಮತ್ತು ಕಾರ್ಕಳದಿಂದ ರೈಲ್ವೇ ನಿಲ್ದಾಣಕ್ಕೆ ಒಟ್ಟು 14 ಕೆಎಸ್ಸಾರ್ಟಿಸಿ ಬಸ್‌ಗಳಿಂದ ಕಾರ್ಮಿಕರನ್ನು ಕರೆತರಲಾಯಿತು.

600 ಮಂದಿಗೆ ನಿರಾಸೆ
ಹೆಚ್ಚುವರಿಯಾಗಿ ತೆರಳಲು ಅವಕಾಶ ಇದೆ ಎಂದು ತಿಳಿದು ಜಿಲ್ಲೆಯ ಬೇರೆ ಬೇರೆ ಭಾಗದಿಂದ ಕಾರ್ಮಿಕರು ಖಾಸಗಿ ವಾಹನಗಳ ಮೂಲಕ ರೈಲು ನಿಲ್ದಾಣದಲ್ಲಿ ನೆರೆದ ಘಟನೆ ನಡೆಯಿತು. ಇದರಲ್ಲಿ ಸೇವಾಸಿಂಧುವಿನಲ್ಲಿ ಅನುಮತಿ ಪತ್ರ ಪಡೆಯದ, ಅಪ್‌ಲೋಡ್‌ ಮಾಡಿ ನೋಂದಣಿ ಆಗದ ಮಂದಿ ನೋಂದಣಿ ಮಾಡಿದ್ದೇವೆ ಎಂದು ಯಾವುದೇ ದಾಖಲೆ ಇಲ್ಲದೆ ಬಂದಿದ್ದರು. ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳು ರೈಲಿನಲ್ಲಿ ಈಗಾಗಲೇ ನಿಗದಿಯಾದ ಸೀಟು ಭರ್ತಿಯಾಗಿದ್ದು ಮುಂದಿನ ದಿನದಲ್ಲಿ ತೆರಳಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸ್ಥಳದಲ್ಲಿ ನೆರೆದಿದ್ದ ಸುಮಾರ 600 ಮಂದಿಯನ್ನು ಹಿಂದೆ ಕಳುಹಿಸಿದ ಘಟನೆಯೂ ನಡೆಯಿತು.

ನಿಲ್ದಾಣದಲ್ಲಿ ಸೇರಿದವರಿಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಶಾಸಕ ರಘುಪತಿ ಭಟ್‌, ರಾಘವೇಂದ್ರ ಕಿಣಿ ನೇತೃತ್ವದ ಕಡಿಯಾಳಿ ಗಣೇಶೋತ್ಸವ ಸಮಿತಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿತು. ರಘುಪತಿ ಭಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಶೀಲ್ದಾರರಾದ ಉಡುಪಿಯ ಪ್ರದೀಪ ಕುರ್ಡೇಕರ್ ‌, ಕಾಪುವಿನ ಮೊಹಮ್ಮದ್‌ ಐಸಾಕ್‌, ಡಿವೈಎಸ್‌ಪಿ ಜೈಶಂಕರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಉಸ್ತುವಾರಿ ವಹಿಸಿದ್ದರು.

Advertisement

ಇನ್ನಷ್ಟು ರೈಲಿಗೆ ವ್ಯವಸ್ಥೆ
ಜಿಲ್ಲೆಯಲ್ಲಿ ಮಧ್ಯಪ್ರದೇಶ 379, ಒಡಿಶಾ 780, ಪಶ್ಚಿಮ ಬಂಗಾಲ 977, ಬಿಹಾರ 1,600, ಛತ್ತೀಸ್‌ಗಢ್‌ 280, ರಾಜಸ್ಥಾನ 379, ಝಾರ್ಖಂಡ್‌ 1.712, ಅಸ್ಸಾಂ 338, ಉತ್ತರಾಖಂಡದ 110 ಮಂದಿ ಸೇವಾಸಿಂಧು ಮೂಲಕ ನೊಂದಣಿ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ, ಉತ್ತರಾಂಚಲ, ಮಧ್ಯಪ್ರದೇಶ, ಝಾರ್ಖಂಡಗೆ ರೈಲು ವ್ಯವ್ಯಸ್ಥೆಗೆ ಪ್ರಯತ್ನ ಮಾಡಲಾಗುತ್ತಿದೆ.
ಸದಾಶಿವ ಪ್ರಭು, ಎಡಿಸಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next