Advertisement

ನಮ್ಮ ಶಾಲೆ ನಮ್ಮ ಹೆಮ್ಮೆ: “ಐಗಳ ಮಠ’ಹೆಸರಲ್ಲಿ ಆರಂಭಗೊಂಡಿತ್ತು ವಿಟ್ಲ ಸರಕಾರಿ ಶಾಲೆ

01:07 PM Nov 09, 2019 | mahesh |

1879 ಶಾಲೆ ಆರಂಭ
ವಿಟ್ಲ ಕಸಬಾ ಗ್ರಾಮದ ಪ್ರಥಮ ಶಾಲೆ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ವಿಟ್ಲ: ವಿಟ್ಲ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ವಿಟ್ಲ ಅರಮನೆಯಲ್ಲಿ “ಐಗಳ ಮಠ’ ಎಂಬ ಹೆಸರಲ್ಲಿ 1879ರಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಅರಮನೆಯವರ ಆಡಳಿತದಲ್ಲಿದ್ದ ಶ್ರೀ ಪಂಚಲಿಂಗೇಶ್ವರ ದೇಗುಲದಲ್ಲಿ ತರಗತಿ ನಡೆಯಿತು. ಆ ಬಳಿಕ ಕಟ್ಟಡ ನಿರ್ಮಾಣಗೊಂಡರೂ ಮಳೆ, ಗಾಳಿಯ ಹೊಡೆತಕ್ಕೆ ಕಟ್ಟಡಕ್ಕೆ ಭಾಗಶಃ ಹಾನಿಯಾಗಿ ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ತರಗತಿ ನಡೆಸಲಾಯಿತು. ಶ್ರೀ ವಿಟ್ಲದ ಅರಸರಾದ ರವಿವರ್ಮ ನರಸಿಂಹ ರಾಜ ಅರಸರ ಪ್ರಯತ್ನದಿಂದ ಹಿ.ಪ್ರಾ. ಶಾಲೆಯಾಗಿ ಭಡ್ತಿ ಹೊಂದಿತು. 1920ರಲ್ಲಿ ತಾಲೂಕು ಬೋರ್ಡ್‌ ಅನುದಾನದಲ್ಲಿ ಕಟ್ಟಡವನ್ನು ವಿಸ್ತರಿಸಲಾಯಿತು.

ಆಗ 38, ಈಗ 1,201
ಶಾಲೆ ಆರಂಭವಾದಾಗ 38 ಮಕ್ಕಳಿದ್ದರು. ಇವರಿಗೆ ಓರ್ವ ಶಿಕ್ಷಕರು. ಈಗ 806 ಮಕ್ಕಳು, 18 ಮಂದಿ ಶಿಕ್ಷಕರಿದ್ದಾರೆ. ಪೂರ್ವ ಪ್ರಾಥಮಿಕ ಸೇರಿದರೆ ಒಟ್ಟು 1,201 ಮಕ್ಕಳಿದ್ದಾರೆ. ಪ್ರಸ್ತುತ ಪೂರ್ವ ಪ್ರಾಥಮಿಕ, ಆಂಗ್ಲ ಮಾಧ್ಯಮ ಶಿಕ್ಷಣ, ಅಡುಗೆ ಸಿಬಂದಿ, ವಾಚ್‌ಮೆನ್‌ ಸಹಿತ ಒಟ್ಟು 39 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಥಮ ಮುಖ್ಯೋಪಾಧ್ಯಾಯ ಬೆಸ್ಟ್‌ ಲಕ್ಷ್ಮಣ ರಾಯ
ಮಂಗಳೂರಿನ ಲಕ್ಷ್ಮಣ ರಾಯರು ಊರಿನ ಪೋಸ್ಟ್‌ ಮಾಸ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತ, 1892ರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿದ್ದರು. ಊರವರು ಅವರನ್ನು ಆಗ ಬೆಸ್ಟ್‌ ಲಕ್ಷ್ಮಣ ರಾಯರೆಂದೇ ಸಂಬೋಧಿಸುತ್ತಿದ್ದರು.

Advertisement

ಕೀರ್ತಿಶೇಷ ಹಿರಿಯ ವಿದ್ಯಾರ್ಥಿಗಳು
ದಿ| ನರಸಿಂಹ ರಾಜರು, ದಿ| ಮಂಜಯ್ಯ ಹೆಗ್ಗಡೆಯವರು, ದಿ| ಪುಟ್ಟುಸ್ವಾಮಿ, ನ್ಯಾಯವಾದಿ ದಿ| ಕೂಡೂರು ನಾರಾಯಣ ರೈ, ಮಾಜಿ ಮಂತ್ರಿ ದಿ| ವಿಟuಲದಾಸ ಶೆಟ್ಟಿ, ಐಎಎಸ್‌ ಅಧಿಕಾರಿ ದಿ| ಸಂಜೀವ ಭಟ್ಟ, ಕಲೆಂಬಿ ಪಠೇಲ ದಿ| ಪ್ರಭಾಕರ ರಾಯರು, ಸಮಾಜ ಸೇವಕ ದಿ| ಎಂ. ರಘುವೀರ ನಾಯಕ್‌ ಈ ಶಾಲೆಯಲ್ಲಿ ಕಲಿತ ಸಾಧಕರು.

ಹಿರಿಯ ವಿದ್ಯಾರ್ಥಿಗಳು
ಪ್ರಸ್ತುತ ಕೇಬಲ್‌ ತಯಾರಿಕೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ, ಜಗತ್ತಿನಲ್ಲೇ ದ್ವಿತೀಯ ಸ್ಥಾನ ಹೊಂದಿರುವ ಸುಪ್ರಜಿತ್‌ ಇಂಡಸ್ಟ್ರೀಸ್‌ ಇಲ್ಲಿನ ಹಿರಿಯ ವಿದ್ಯಾರ್ಥಿ ಅಜಿತ್‌ ಕುಮಾರ್‌ ರೈ ಅವರದು ಎನ್ನುವುದು ಹೆಮ್ಮೆ. ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ್‌, ಶಾಲೆಯ ದತ್ತು ಸ್ವೀಕರಿಸಿದ ಸುಬ್ರಾಯ ಪೈ ಮತ್ತು ಅನೇಕ ಮಂದಿ ದೇಶ-ವಿದೇಶಗಳಲ್ಲಿ ಸಾಧಕ ವ್ಯಕ್ತಿಗಳಾಗಿದ್ದಾರೆ.

3.63 ಎಕ್ರೆ ಜಾಗ
ಶಾಲೆಗೆ 3.63 ಎಕ್ರೆ ಜಾಗವಿದೆ. 30 ತರಗತಿ ಕೊಠಡಿ ಗಳಿವೆ. 24 ಮೂತ್ರಾಲಯಗಳಿವೆ. ಗ್ರಂಥಾಲಯ, ಕಂಪ್ಯೂಟರ್‌ ಪ್ರಯೋಗಾಲಯ, ಬಯಲು ರಂಗ ಮಂದಿರ, ಬೋಧನ ಉಪಕರಣ ಕೊಠಡಿ, ಬಾವಿ, ಕೊಳವೆಬಾವಿ, ತೆಂಗಿನ ಮರ, ತರಕಾರಿ ತೋಟ, ಅರಣ್ಯ ಇಲಾಖೆಯ ನೆಡು ತೋಪು, ಬಾಲವನ, ಹೂ ತೋಟ, ಬಯಲು ಪಾಠ ಶಾಲೆಗಳಿವೆ. ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯವಿದೆ.

ನನಗೆ ಏಕಾಗ್ರತೆಯಿರಲಿಲ್ಲ ಆಗ. ಆದರೆ ನನಗೆ ಆಗ ಕಲಿಸಿದ ಸಹನಾಮಯಿ ಗುರುಗಳನ್ನು ಮರೆಯುವ ಹಾಗಿಲ್ಲ. ಪ್ರತಿಯೊಂದು ವಿಚಾರಕ್ಕೂ ಹುರಿದುಂಬಿಸುತ್ತಿದ್ದರು. ನಮ್ಮ ನಾಲ್ಕನೇ ತರಗತಿ ಕೊಠಡಿ ಮುಖ್ಯ ರಸ್ತೆ ಬದಿಯಲ್ಲಿತ್ತು. ಆ ಕೊಠಡಿಯನ್ನು ನೋಡಿದಾಗಲೆಲ್ಲ ನನ್ನ ಬಾಲ್ಯ ನೆನಪಾಗುತ್ತದೆ.
-ವಿ. ಮನೋಹರ್‌, ಚಲನಚಿತ್ರ ಸಂಗೀತ ನಿರ್ದೇಶಕರು

ಸುಬ್ರಾಯ ಪೈ ಅವರು ಭಾರತೀ ಜನಾರ್ದನ ಟ್ರಸ್ಟ್‌ ಮೂಲಕ ದತ್ತು ಸ್ವೀಕರಿಸಿ, ಮೂಲ ಆವಶ್ಯಕತೆಗಳನ್ನು ಪೂರೈಸಿದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಲು ಸಹಕಾರಿಯಾಗಿದೆ. ಎಸ್‌ಡಿಎಂಸಿ ಸಹಕಾರವೂ ಅತ್ಯುತ್ತಮ. ಅಜಿತ್‌ ಕುಮಾರ್‌ ರೈ ಅವರು 1.25 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನೀಡಿರುವುದರಿಂದ ಮಕ್ಕಳ ಸಂಖ್ಯೆ ಹೆಚ್ಚಿದರೂ ನಿಭಾಯಿಸಲು ಸಾಧ್ಯವಾಯಿತು.
-ಪುಷ್ಪಾ ಎಚ್‌., ಮುಖ್ಯ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next