ಟರ್ಕಿಯಲ್ಲಿ ಭೂಕಂಪದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ದೇಶದ ವಿಪತ್ತು ನಿರ್ವಹಣಾ ದಳ ನಡೆಸಿದ ಕಾರ್ಯಾಚರಣೆಗೆ ಆ ದೇಶದ ಜನರು ಮುಕ್ತ ಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಒಂದೇ ರಾತ್ರಿಯಲ್ಲಿ 140 ಮಂದಿಗೆ ಅಲ್ಲಿಗೆ ತೆರಳಲು ತುರ್ತಾಗಿ ಪಾಸ್‌ಪೋರ್ಟ್ ಒದಗಿಸಿದ ಪ್ರಕ್ರಿಯೆ, ಸರಿಯಾದ ರೀತಿಯಲ್ಲಿ ಸ್ನಾನ ಇಲ್ಲದೆ ದಿನಗಳನ್ನು ಕಳೆದ ಬಗ್ಗೆ “ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಹಂಚಿಕೊಂಡಿದೆ.
ನಿಸ್ವಾರ್ಥ ಸೇವೆಗೆ ಆ ದೇಶದ ಜನರ ಪ್ರೀತಿ, ಮನತುಂಬಿದ ಹಾರೈಕೆ, ಕೃತಜ್ಞತೆಯ ಬಿಸಿ ಕಣ್ಣಹನಿಯನ್ನು ತಂಡ ನೆನಪಿನ ಬುತ್ತಿಯಲ್ಲಿ ಹೊತ್ತು ತಂದಿದೆ.
ಭೂಕಂಪದಿಂದ ತತ್ತರಿಸಿದ್ದ ಟರ್ಕಿಗೆ ನೆರವು ನೀಡಲು ನಿರ್ಧರಿಸಿ “ಆಪರೇಷನ್ ದೋಸ್ತ್’ಗೆ ಕೇಂದ್ರ ಸರ್ಕಾರ ನಿರ್ಧರಿಸುತ್ತಿದ್ದಂತೆಯೇ ಎನ್‌ಡಿಆರ್‌ಎಫ್ನ 152 ಸಿಬ್ಬಂದಿಯ 3 ಎನ್‌ಡಿಆರ್‌ಎಫ್ ತಂಡ ಹಾಗೂ 6 ಸೇನಾ ಶ್ವಾನಗಳು. ಕೇವಲ 8 ಗಂಟೆಯ ಅವಧಿಯಲ್ಲಿ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ, 60ಕ್ಕೂ ಅಧಿಕ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪನೆ, 24 ಗಂಟೆಗಳ ಅವಧಿಯೂ 3,600ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ, ಶ್ವಾನದಳದಿಂದ ನಿರಂತರ ಹುಡುಕಾಟ ಹೀಗೆ ಫೆ. 7 ರಿಂದ ಫೆ.19ರ ವರೆಗೆ ಭಾರತದ ತಂಡ, ಟರ್ಕಿ ಜನರ ಜೀವ ಉಳಿಸಲು ಕೆಲಸ ಮಾಡಿದೆ.
“ನಮಗಿನ್ನೂ ಟರ್ಕಿಯದ್ದೇ ಚಿಂತೆ, ಇನ್ನಷ್ಟು ಮಂದಿಯ ಜೀವವನ್ನು ಉಳಿಸಬಹುದಿತ್ತು ಎನ್ನುವ ಭಾವ ಕಾಡುತ್ತಲೇ ಇದೆ’ ಎಂದು ಹೇಳಿದ್ದಾರೆ.
ಕಣ್ಣೀರಿಟ್ಟರು ! : ಟರ್ಕಿ ಜನರು ನಮ್ಮ ಸೇವೆಗೆ ಪ್ರತಿಯಾಗಿ ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದರು. ನಮ್ಮನ್ನು ಅಪ್ಪಿ, ಸಹಾಯ ಮರೆಯುವುದಿಲ್ಲವೆಂದರು. ನಮ್ಮ ಕುಟುಂಬಸ್ಥರೇ ಸಂಕಟದಲ್ಲಿ ಸಿಕ್ಕ ಅನುಭವ ಆಗಿತ್ತು ಎಂದು ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ. ರಕ್ಷಾಣಾ ತಂಡದ ಅಧಿಕಾರಿಯೊಬ್ಬರಿಗೆ ಸಸ್ಯಹಾರ ಬೇಕಿತ್ತು. ಈ ವೇಳೆ ಅಲ್ಲಿನ ಜನ ಸಿಕ್ಕ, ಹಣ್ಣು ತರಕಾರಿಗಳನ್ನೇ ನೀಡಿ ಸಹಕರಿಸಿದರು ಎಂದು ನೆನಪಿಸಿಕೊಂಡರು.