Advertisement

14 ವರ್ಷ ಜೈಲುವಾಸ ಅನುಭವಿಸಿ ಹೊರ ಬಂದು ವೈದ್ಯನಾದ!

10:01 AM Feb 16, 2020 | Lakshmi GovindaRaj |

ಕಲಬುರಗಿ: “ಪರಸಂಗ’ಕ್ಕೆ ಕೊಲೆ ಮಾಡಿ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದ ವ್ಯಕ್ತಿಯೊಬ್ಬ ಎಂಬಿಬಿಎಸ್‌ ಪದವಿ ಮುಗಿಸಿ ಈಗ ವೈದ್ಯನಾಗಿದ್ದಾನೆ. ಜಿಲ್ಲೆಯ ಅಫ‌ಜಲಪುರ ತಾಲೂಕಿನ ಭೋಸಗಾ ಗ್ರಾಮದ ಡಾ| ಸುಭಾಷ ತುಕಾರಾಂ ಪಾಟೀಲ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಬಿಎಸ್‌ ಓದುತ್ತಿದ್ದರು.

Advertisement

ಆಗ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅಬಕಾರಿ ಗುತ್ತಿಗೆದಾರ ಅಶೋಕ ಗುತ್ತೇದಾರ ಎಂಬವರ ಪತ್ನಿ ಪದ್ಮಾವತಿ ಅವರ ಜತೆ ಪ್ರೇಮಾಂಕುರವಾಗಿತ್ತು. ಪ್ರೇಮದ ಅಮಲಿನಲ್ಲಿ ಪದ್ಮಾವತಿ ಜತೆಗೂಡಿ 2002ರಲ್ಲಿ ಅಶೋಕ ಗುತ್ತೇದಾರ ಅವರನ್ನು ಬಂದೂಕಿನಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಜೀವಾವಧಿ ಶಿಕ್ಷೆಗೊಳಗಾಗಿ 7 ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ 7 ವರ್ಷ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲೂ ಜೈಲುವಾಸ ಅನುಭವಿಸಿದ್ದರು.

ಕೊಲೆ ಮಾಡಿದ ವೇಳೆ ಡಾ| ಸುಭಾಷ ಎಂಬಿಬಿಎಸ್‌ ದ್ವಿತೀಯ ವರ್ಷ ಓದುತ್ತಿದ್ದ. ನಂತರ 2016ರ ಆ.15ರಂದು ಶಿಕ್ಷೆ ಅನುಭವಿಸಿ ಹೊರ ಬಂದ ನಂತರ ಡಾ| ಸುಭಾಷ ಪಾಟೀಲ ರಾಜೀವ ಗಾಂಧಿ ಆರೋಗ್ಯ ವಿವಿಯಿಂದ ವೈದ್ಯ ಪದವಿ ಮುಂದುವರಿಸುವ ಕುರಿತು ಅನುಮತಿ ಪಡೆದು 2017 ಹಾಗೂ 2018ರಲ್ಲಿ ಮೂರನೇ ಹಾಗೂ ನಾಲ್ಕನೇ ವರ್ಷದ ಎಂಬಿಬಿಎಸ್‌ ಪರೀಕ್ಷೆ ಬರೆದು, 2019ರ ಫೆಬ್ರುವರಿಯಲ್ಲಿ ಉತ್ತೀರ್ಣವಾಗಿದ್ದಾರೆ.

ಬಳಿಕ ಒಂದು ವರ್ಷ ಬಸವೇಶ್ವರ ಸಾರ್ವಜನಿಕ ಹಾಗೂ ಬೋಧನಾ ಆಸ್ಪತ್ರೆಯಲ್ಲಿ ಹೌಸಮನ್‌ಶಿಪ್‌ (ಶಿಕ್ಷಣಾ ತರಬೇತಿ) ಪಡೆದು ಇಂದು (ಫೆ.15) ಶನಿವಾರ ವೈದ್ಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿ (ಎಂಆರ್‌ಎಂಸಿ)ನಿಂದ ವೈದ್ಯ ಪದವಿ ಪಡೆದು ಸಮಾಜಮುಖೀಯಾಗಿ ಹೊರ ಹೊಮ್ಮಿದ್ದಾರೆ.

ಒಂದೇ ಯತ್ನದಲ್ಲಿ ಪಾಸ್‌: ಜೈಲುವಾಸ ಅನುಭವಿಸಿ ಹೊರ ಬಂದವರು ಮೊದಲಿನಂತೆ ಸಾಮಾಜಿಕವಾಗಿ ಬೆರೆಯುವುದು ಕಡಿಮೆ. ಮುಖ್ಯವಾಗಿ ಯಾವ ತಪ್ಪು ಮಾಡಿ ಜೈಲಿಗೆ ಹೋಗಿರುತ್ತಾರೆಯೋ ಆ ಗುಂಗಿನಿಂದ ಹೊರ ಬರುವುದೇ ಇಲ್ಲ. ಆದರೆ ಸುಭಾಷ ಪಾಟೀಲ ಜೈಲಿನಲ್ಲಿ ಹಾಗೂ ಹೊರ ಬಂದ ಮೇಲೂ ಅನೇಕ ನಿಂದನೆ ಕೇಳಿದರೂ, ಅದಕ್ಕೆ ಕುಗ್ಗದೇ 14 ವರ್ಷಗಳ ಹಿಂದೆ ಇದ್ದ ಕಲಿಕಾ ಮನೋವೃತ್ತ ಮೈಗೂಡಿಸಿಕೊಂಡು ಒಂದೇ ಪ್ರಯತ್ನದಲ್ಲಿ ಎಲ್ಲ ವಿಷಯಗಳಲ್ಲಿ ಪಾಸಾಗಿದ್ದಾರೆ.

Advertisement

ಪತ್ರಿಕೋದ್ಯಮ ಪದವಿ!: ಜೈಲಿನಲ್ಲಿದ್ದಾಗಲೇ ಮೈಸೂರಿನ ಕರ್ನಾಟಕ ಮುಕ್ತ ವಿವಿಯಿಂದ ಎಂಎ ಪತ್ರಿಕೋದ್ಯಮ ಪದವಿ ಪಡೆದಿದ್ದ ಡಾ| ಸುಭಾಷ ಪಾಟೀಲ, ಈಗ ಎಂಬಿಬಿಎಸ್‌ ಮುಗಿಸಿ ಜ್ಞಾನವಂತಿಕೆ ಮೆರೆದಿದ್ದಾರೆ. ಯಾವುದಾದರೂ ಪದವಿ ಒಂದೆ ರಡು ವರ್ಷ ಅಂತರವಾದರೆ ಉತ್ತೀರ್ಣವಾಗುವುದೇ ಅಪರೂಪ. ಆದರೆ ಡಾ| ಸುಭಾಷ 14 ವರ್ಷಗಳ ಹಿಂದಿನಂತೆ ಈಗಲೂ ತನಗಿಂತ 20 ವರ್ಷ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ತರಗತಿಗೆ ಹಾಜರಾಗಿ ಅದರಲ್ಲೂ ತನ್ನ ವಿದ್ಯಾರ್ಥಿ ಸಹಪಾಠಿಗಳೇ ಬೋಧಕರಾಗಿದ್ದರಿಂದ ಅವರಿಂದ ಬೋಧನೆ ಕಲಿತಿರುವುದು ಒಂದು ಅಪರೂಪ-ಅಸಾಮಾನ್ಯ ಸಂಗತಿ.

ಇಂದು ಪದವಿ ಪ್ರದಾನ: ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿ(ಎಂಆರ್‌ಎಂಸಿ)ನ ಪ್ರಸಕ್ತ ಸಾಲಿನ ವೈದ್ಯಕೀಯ ಪದವಿ ಪ್ರದಾನ ಸಮಾರಂಭ ಫೆ.15ರಂದು ಸಂಜೆ 5:30ಕ್ಕೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ| ಎಸ್‌. ಸಚ್ಚಿದಾನಂದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ನೆರವೇರಿಸಿ ವೈದ್ಯಕೀಯ ಪದವಿ ಪ್ರದಾನ ಮಾಡಲಿದ್ದಾರೆ.

ಸುಭಾಷ ವಿದ್ಯಾರ್ಥಿಯಾಗಿ ತರಗತಿಗೆ ಹಾಜರಾಗಿರುವಂತೆ ಈಗಲೂ ಅದೇ ಶ್ರದ್ಧೆ ಹಾಗೂ ಕಲಿಕಾ ಆಸಕ್ತಿಯಿಂದ ಪಾಲ್ಗೊಂಡು ಪದವಿ ಪೂರ್ಣಗೊಳಿಸಿರುವುದು ಸಮಾಜಕ್ಕೆ ಮಾದರಿ. 14 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಎಳ್ಳಷ್ಟೂ ಕುಗ್ಗದೇ ತನಗಿಂತ 18ರಿಂದ 20 ವರ್ಷ ಕಡಿಮೆ ವಯಸ್ಸಿನ ವಿದ್ಯಾರ್ಥಿಗ ಳೊಂದಿಗೆ ಅದೇ ಉತ್ಸಾಹದಿಂದ ಕಲಿತಿರುವುದು ನಿಜಕ್ಕೂ ಆಶ್ಚರ್ಯ.
-ಡಾ|ಉಮೇಶ್ಚಂದ್ರ ಡಿ.ಜಿ. ಡೀನ್‌, ಎಂಆರ್‌ಎಂಸಿ

14 ವರ್ಷಗಳ ಜೈಲುವಾಸ ಎಲ್ಲ ನಿಟ್ಟಿನ ಪಾಠ ಕಲಿಸಿದೆ. ಜೈಲಿನಲ್ಲಿ ದ್ದಾಗ ಗ್ರಂಥಾಲಯದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಜೈಲಿಗೆ ಹೋದ ನಂತರ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂಬಿಬಿಎಸ್‌ ಪದವಿ ಪಡೆದಿದ್ದರಿಂದ ಸಣ್ಣದಾದ ಕ್ಲಿನಿಕ್‌ ತೆಗೆದು ಕೈದಿಗಳ ಸಂಬಂಧಿಕರಿಗೆ ಹಾಗೂ ಸೈನಿಕರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ನಿರ್ಧರಿಸಿದ್ದೇನೆ. ಈಗೇನಿದ್ದರೂ ಸಮಾಜಕ್ಕೆ ವೈದ್ಯ ಸೇವೆಗೆ ಕಂಕಣಬದ್ಧನಾಗಿದ್ದೇನೆ.
-ಡಾ| ಸುಭಾಷ ಟಿ. ಪಾಟೀಲ, ವೈದ್ಯ ಪದವೀಧರ

ಡಾ| ಸುಭಾಷ ಪಾಟೀಲ ಹಳೇ ಸಹಪಾಠಿ. ನಾವು ವೈದ್ಯ ಕಾಲೇ ಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದರೆ, ಸುಭಾಷ ಪ್ರಧಾನ ಕಾರ್ಯದರ್ಶಿಯಾಗಿದ್ದ. ಆಕಸ್ಮಿಕವಾಗಿ ಅಪರಾಧ ಪ್ರಕರಣ ಎಸಗಿ, ಜೈಲುವಾಸ ಅನುಭವಿಸಿ ಹೊರ ಬಂದ ನಂತರ ಮೊದಲಿನ ಉತ್ಸುಕತೆಯಿಂದಲೇ ಪದವಿ ಪೂರ್ಣಗೊಳಿಸಿರುವುದು ಹೆಮ್ಮೆ ಮೂಡಿಸುವಂತಿದೆ.
-ಡಾ| ಕಿರಣ ದೇಶಮುಖ, ಮುಖ್ಯಸ್ಥರು, ಇಎನ್‌ಟಿ ವಿಭಾಗ, ಬಸವೇಶ್ವರ ಆಸ್ಪತ್ರೆ

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next