ಬೆಳ್ತಂಗಡಿ: ರಬ್ಬರ್ ಮರ ಕೊಂಬೆಯೊಂದು ಎಚ್.ಟಿ. ಲೈನ್ ವಿದ್ಯುತ್ ತಂತಿಗೆ ಸ್ಪರ್ಶಿಸುತ್ತದೆ ಎಂಬ ನೆಪದಲ್ಲಿ ಕೃಷಿಕರೊಬ್ಬರ 40 ರಬ್ಬರ್ ಮರಗಳನ್ನು ಯಾವುದೇ ಮಾಹಿತಿ ನೀಡದೆ ಹಿರಿಯಡ್ಕ ಕೆಪಿಟಿಸಿಎಲ್ ಸಂಸ್ಥೆಯ ಸಿಬಂದಿಗಳು ಕಡಿದು ಹಾಕಿದ ಅಮಾನವೀಯ ಘಟನೆ ನಾರಾವಿ ಗ್ರಾಮದಲ್ಲಿ ನಡೆದಿದೆ.
ನಾರಾವಿ ಗ್ರಾಮದ ಭೂತಗುಡ್ಡೆ ಎಂಬಲ್ಲಿ ಎನ್.ಶ್ರೀನಿವಾಸ್ ವಿ.ಕಿಣಿ ಎಂಬವರಿಗೆ ಸೇರಿದ ಸ.ನಂ. 456ರಲ್ಲಿ 3.22 ಎಕರೆ ಜಮೀನಿನಲ್ಲಿ ಫಲವತ್ತಾದ ರಬ್ಬರ್ ಕೃಷಿ ಮಾಡಿದ್ದರು. ಎ.8 ಏಕಾಏಕಿ ಕೆಪಿಟಿಸಿಎಲ್ ಹಿರಿಯಡ್ಕ ಶಾಖೆಯ ಸಿಬಂದಿಗಳು ಅಕ್ರಮ ಪ್ರವೇಶಗೈದು 14 ವರ್ಷ ಪ್ರಾಯದ 38 ಮರಗಳನ್ನು ಯಾವುದೇ ಮಾಹಿತಿ ನೀಡದೆ ಕಡಿದುರುಳಿಸಲಾಗಿದೆ.
ಲೈನ್ ಕೆಳಭಾಗ ಎರಡು ಬದಿ 11*11 ಒಟ್ಟು 22 ಅಡಿ ಸ್ಥಳವಕಾಶ ಬಿಟ್ಟಿದ್ದ ಮರಗಳನ್ನು ಕಡಿದು ಹಾಕಲಾಗಿದೆ. ಕೇವಲ ಟ್ರಿಮ್ಮಿಂಗ್ ಮಾಡಬೇಕಿದ್ದ ಮರಗಳನ್ನು ಕಡಿಯಲಾಗಿದೆ. ಕಷ್ಟಪಟ್ಟು ಬೆಳೆದ ಫಲವತ್ತಾದ ರಬ್ಬರ್ ಗಿಡಗಳನ್ನು ಏಕಾಏಕಿ ಕೃಷಿಯನ್ನು ಈ ರೀತಿ ನಾಶ ಮಾಡಿದರೆ ಹೇಗೆ ಎಂದು ಶ್ರೀನಿವಾಸ್ ಕಿಣಿ ಪ್ರಶ್ನಿಸಿದ್ದಾರೆ.
ಈ ಕುರಿತು ಮೆಸ್ಕಾಂ ಇಲಾಖೆಗೆ ಪ್ರಶ್ನಿಸಿದರೆ ಕಾನೂನು ಬದ್ಧವಾಗಿ ಕಡಿದಿದ್ದೇವೆ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಕೃಷಿಕರಿಗೆ ಮಾಹಿತಿ ನೀಡದಿರುವ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಈ ಕುರಿತು ಜಾಗದ ಕೃಷಿಕರು ವೇಣೂರು ಪೊಲೀಸ್ ಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.