ಅಹಮದಾಬಾದ್: ಕೃಷಿಕರು ಸದಾ ಪ್ರಯೋಗಶೀಲರಾಗಿರುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಅದಕ್ಕೊಂದು ಸೇರ್ಪಡೆ ಎಂಬಂತೆ ಗುಜರಾತ್ ನ ಧಾರಿ ಎಂಬ ಪುಟ್ಟ ಗ್ರಾಮದ ರೈತರೊಬ್ಬರು ಒಂದೇ ಮರದಲ್ಲಿ 14 ವಿಧದ ಮಾವಿನ ಹಣ್ಣುಗಳನ್ನು ಬೆಳೆಸುವ ಮೂಲಕ ಗಮನಸೆಳೆದಿದ್ದಾರೆ.
ಇದನ್ನೂ ಓದಿ:ಪ್ರಜಾಪ್ರಭುತ್ವದ ಹಬ್ಬದಲ್ಲಿ ಆರೋಪ- ಆಮಿಷಗಳದ್ದೇ ಆಟ: ಹೇಗಿತ್ತು ಈ ಬಾರಿಯ ಚುನಾವಣೆ?
ಈ ಮರದಲ್ಲಿ ಹೋಳಿ ಹಬ್ಬದಿಂದ ದೀಪಾವಳಿವರೆಗೆ ಅಂದರೆ ಸುಮಾರು ಆರು ತಿಂಗಳ ಕಾಲ ಮಾವಿನ ಹಣ್ಣು ಫಸಲು ನೀಡುತ್ತದೆ ಎಂದು ವರದಿ ತಿಳಿಸಿದೆ. ಧಾರಿಯ ದಿಟ್ಲ ಗ್ರಾಮದ ಉಕಾಭಾಯಿ ಭಟ್ಟಿ ಎಂಬ ರೈತ ಒಂದೇ ಮರದಲ್ಲಿ ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಸಿರುವ ಹಿಂದಿನ ರಹಸ್ಯದ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ್ದಾರೆ.
ಕಸಿ ಮಾಡುವ ವಿಧಾನವನ್ನು ಬಳಸಿಕೊಂಡು ಒಂದೇ ಮರದಲ್ಲಿ 14 ಬಗೆಯ ಮಾವಿನಹಣ್ಣುಗಳನ್ನು ಬೆಳೆಸಿರುವುದಾಗಿ ತಮ್ಮ ಅನುಭವ ಹಂಚಿಕೊಂಡಿರುವ ಭಟ್ಟಿ ಅವರು, ಸಾಮಾನ್ಯ ಮಾವು ಪ್ರಿಯರಿಗೂ ಕೂಡಾ ಇದೊಂದು ಮ್ಯಾಜಿಕ್ ಅಂತ ಅನ್ನಿಸಬಹುದು. ಆದರೂ ಕೂಡಾ ತಮ್ಮ ತೋಟದಲ್ಲಿ ಇನ್ನೂ ಹೆಚ್ಚಿನ ವಿಧದ ಮಾವುಗಳನ್ನು ಬೆಳೆಸುವ ಇಂಗಿತವನ್ನು ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಕೃಷಿ ಪ್ರಯಾಣ ನನಗೆ ತುಂಬಾ ಸುಲಭವಾಗಿರಲಿಲ್ಲ. ಪುಸ್ತಕಗಳನ್ನು ಓದುತ್ತಿರುವ ಸಂದರ್ಭದಲ್ಲಿ ನನಗೆ ಕೆಲವು ಸ್ಥಳೀಯ ಮಾವಿನ ತಳಿಗಳ ಹೆಸರುಗಳನ್ನು ಗಮನಿಸಿದ್ದೆ, ಆದರೆ ಅವುಗಳಲ್ಲಿ ಕೆಲವು ಅಳಿವಿನಂಚಿನಲ್ಲಿದ್ದವು. ಅದಕ್ಕಾಗಿ ನಾನು ಮಹಾರಾಷ್ಟ್ರ, ರಾಜಸ್ಥಾನದ ಕೃಷಿ ಯೂನಿರ್ವಸಿಟಿ ಹಾಗೂ ಡ್ಯಾಂಗ್ ನ ಅರಣ್ಯ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಆ ಪ್ರಭೇದಗಳನ್ನು ಹುಡುಕಿರುವುದಾಗಿ ಭಟ್ಟಿ ತಿಳಿಸಿದ್ದಾರೆ.
ಭಟ್ಟಿ ಅವರ ಮಾವಿನ ಮರದಲ್ಲಿ ಆಮ್ರಪಾಲಿ, ನೀಲಂ, ದಾಶೇರಿ, ಬೇಗಂ, ನಿಲೇಶನ್, ನೀಲ್ ಫಗುನ್, ಸುಂದರಿ, ಬನಾರಸಿ ಲ್ಯಾಂಗ್ಡೋ, ಕೇಸರ್, ದಾದ್ಮಿಯೋ, ಗುಲಾಬಿಯೋ, ಕನೋಜಿಯೋ, ದೂದ್ ಪೇಡೋ ಮತ್ತು ಖೋಡಿ ಸೇರಿದಂತೆ ಮುಂತಾದ ತಳಿಯ ಹಣ್ಣುಗಳನ್ನು ಬೆಳೆಸಿದ್ದಾರೆ.