Advertisement

ಕದ್ರಿಯಲ್ಲಿ ಮಾರ್ಕೆಟ್‌ ಸಂಕೀರ್ಣ ನಿರ್ಮಾಣಕ್ಕೆ 14 ಮರಗಳು ಬಲಿ !

05:30 AM Mar 07, 2019 | |

ಕದ್ರಿ : ನೂರಾರು ವರ್ಷ ಕಾಲ ಜನರಿಗೆ ನೆರಳಿನ ಆಶ್ರಯದೊಂದಿಗೆ ನಗರವನ್ನು ಹಸುರೀಕರಣಗೊಳಿಸಿದ್ದ ಅದೆಷ್ಟೊ ಮರಗಳು ಈಗ ಅಭಿವೃದ್ಧಿ ಹೆಸರಿನಲ್ಲಿ ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಅದರಂತೆ‌ ಕದ್ರಿಯಲ್ಲಿ ಮಾರ್ಕೆಟ್‌ ಸಂಕೀರ್ಣ ನಿರ್ಮಾಣಕ್ಕಾಗಿ ಹದಿನಾಲ್ಕಕ್ಕೂ ಹೆಚ್ಚು ವೃಕ್ಷಗಳನ್ನು ಕಡಿಯಲಾಗಿದೆ!

Advertisement

ಕದ್ರಿ ಮಲ್ಲಿಕಟ್ಟೆಯಲ್ಲಿ ಈಗಿರುವ ಮಾರ್ಕೆಟ್‌ ಮುಕ್ತ ಸ್ಥಳದಲ್ಲಿದೆ. ಈ ಮಾರುಕಟ್ಟೆಗೆ ಸೂಕ್ತ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮಾರುಕಟ್ಟೆ ಸಂಕೀರ್ಣ ಮಾಡುವುದು ಪಾಲಿಕೆಯ ಉದ್ದೇಶ. ಆದರೆ ಮಾರುಕಟ್ಟೆಗೆ ಕಟ್ಟಡ ನಿರ್ಮಾಣಕ್ಕಾಗಿ ಕದ್ರಿ ಬಸ್‌ ನಿಲ್ದಾಣದ ಹಿಂಬದಿಯಲ್ಲಿ ಮರಗಳನ್ನು ಕಡಿದು ಹಾಕಲಾಗಿದೆ. ಮೊದಲೇ ಬಿಸಿಲಿನ ಪ್ರಖರತೆಗೆ ಕಂಗೆಟ್ಟಿರುವ ನಗರದಲ್ಲಿ ಆಗಾಗ ಮರಗಳನ್ನು ಕಡಿದು ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ವಾತಾವರಣ ಇನ್ನಷ್ಟು ಹದಗೆಡುವುದಕ್ಕೆ ದಾರಿ ಮಾಡಿಕೊಡಲಾಗುತ್ತಿದೆ. ಒಂದು ಕಡೆ ಪರಿಸರ ನಾಶ ಮಾಡಬಾರದು ಎಂಬುದಾಗಿ ಹೇಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನೊಂದೆಡೆ ಮರಗಳನ್ನೇ ನಾಶ ಮಾಡುತ್ತಿದ್ದಾರೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೆಲಸಮವಾದ ಮರ
ಪ್ರಸ್ತಾವಿತ ಕದ್ರಿ ಮಾರುಕಟ್ಟೆ ನಿರ್ಮಾಣಕ್ಕೆ ಈ ಮರಗಳು ಅಡಚಣೆಯಾಗಿವೆ ಎಂಬ ಕಾರಣಕ್ಕಾಗಿ ಮರ ಕಡಿಯಲಾಗುತ್ತಿದೆ. ಎರಡು ಹಲಸು, ಆರು ಸಾಗುವಾನಿ, ಒಂದು ಮಾವು, ಒಂದು ಅಂಬಟೆ, ಎರಡು ಬಾದಾಮ್‌, ಒಂದು ಅಶೋಕ, ಒಂದು ದೇವದಾರು ಮರ ಸೇರಿ ಒಟ್ಟು ಹದಿನಾಲ್ಕು ಮರಗಳನ್ನು ಕಡಿಯಲಾಗಿದೆ. 

ಎರಡು ಅಂತಸ್ತಿನ ಕಟ್ಟಡ
ಈ ಸ್ಥಳದಲ್ಲಿ 2 ಅಂತಸ್ತಿನ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಲಿದೆ. ಇದಕ್ಕೆ ಅಡ್ಡಿಯಾದ 14 ಮರಗಳನ್ನು ಮಾತ್ರ ತೆರವು ಮಾಡಲಾಗಿದೆ. ಎಲ್ಲ ಮರಗಳನ್ನು ಕಡಿದಿಲ್ಲ ಎಂದು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್‌ ಹೇಳಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ ಮಾಡುತ್ತಿರುವುದರಿಂದ ಪರಿಸರ ನಾಶಕ್ಕೆ ಕಾರಣ ವಾಗುತ್ತಿದೆ. ಮರ ಕಡಿದು ಕಟ್ಟಡ ನಿರ್ಮಾಣಗೊಳಿಸಿದರೆ ಮುಂದೊಂದು ದಿನ ಕಟ್ಟಡಗಳನ್ನು ಮಾತ್ರ ನೋಡಬೇಕಾದ ಪರಿಸ್ಥಿತಿ ಬರಬಹುದು ಎಂದು ಪರಿಸರ ಪ್ರೇಮಿ ರೋಸಿ ಡಿ’ಸಿಲ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಾಂತರ ಅವಕಾಶ
ರಸ್ತೆ ಮತ್ತು ವೃತ್ತ ವಿಸ್ತರಣೆ ಹಿನ್ನೆಲೆಯಲ್ಲಿ ಬಂಟ್ಸ್‌ ಹಾಸ್ಟೆಲ್‌ನಲ್ಲಿ ಸುಮಾರು 200 ವರ್ಷ ಹಳೆಯದಾದ ಅಶ್ವತ್ಥ ಮರವನ್ನು ಈ ಹಿಂದೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ, ಪಂಪ್‌ವೆಲ್‌ ಮತ್ತು ಉರ್ವದಲ್ಲಿಯೂ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ ಎರಡು ಮರಗಳನ್ನು ಬುಡ ಸಮೇತ ಸ್ಥಳಾಂತರ ಮಾಡಲಾಗಿತ್ತು. ಇದೀಗ ಕದ್ರಿ ಮಾರುಕಟ್ಟೆ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ನೆರಳು ನೀಡುತ್ತಿದ್ದ ಮರಗಳನ್ನು
ಕಡಿಯಲಾಗಿದೆ. ಕಡಿಯಲಾದ ಹದಿನಾಲ್ಕು ಮರಗಳ ಪೈಕಿ ಕೆಲವು ಮರಗಳನ್ನಾದರೂ ಸ್ಥಳಾಂತರ ಮಾಡಬಹುದಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ. 

Advertisement

ಪ್ರತಿಕ್ರಿಯಿಸದ ಕಾರ್ಪೊರೇಟರ್‌!
ಸಾಮಾಜಿಕ ತಾಣಗಳಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿದ್ದು, ಪದೇ ಪದೆ ಮರಗಳನ್ನು ಕಡಿಯುವುದರಿಂದ ಪರಿಸರ ನಾಶಗೊಳ್ಳುತ್ತಿರುವ ಬಗ್ಗೆ ಸ್ಥಳೀಯಾಡಳಿತ ಏಕೆ ಯೋಚಿಸುತ್ತಿಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಜೀವವಾಯು ಕರುಣಿಸುವ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಡಿಯಲಾಗುತ್ತಿದೆ. ಮೂರ್‍ನಾಲ್ಕು ದಿನಗಳಿಂದ ಇಲ್ಲಿ ಮರ ಕಡಿಯುವಿಕೆ ಮುಂದುವರಿದಿದೆ ಎಂದು ಪರಿಸರವಾದಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ ಸಬಿತಾ ಮಿಸ್ಕಿತ್‌ ಅವರನ್ನು ಸಂಪರ್ಕಿಸಿದರೆ, ‘ನೀವು ಆಯುಕ್ತರನ್ನು ಸಂಪರ್ಕಿಸಿ; ಅವರು ಉತ್ತರ ನೀಡುತ್ತಾರೆ’ ಎಂದು ಸಾಗ ಹಾಕಿದರು. ಪಾಲಿಕೆ ಆಯುಕ್ತರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಗಿಡ ನೆಟ್ಟು ಪೋಷಣೆ
ಮರಗಳನ್ನು ಸ್ಥಳಾಂತರ ಮಾಡಬಹುದಾಗಿತ್ತು. ಆದರೆ ಎಲ್ಲ ಮರಗಳ ಸ್ಥಳಾಂತರಕ್ಕೆ ಸಾಕಷ್ಟು ಖರ್ಚು ತಗಲುತ್ತದೆ. ಈಗಾಗಲೇ ಅನಿವಾರ್ಯವಾಗಿ ಮರ ಕಡಿಯಬೇಕಾಗಿ ಬಂದಲ್ಲಿ ಅದಕ್ಕೆ ಐದು ಪಟ್ಟು ಗಿಡವನ್ನು ನೆಡಲಾಗುತ್ತದೆ. ಕದ್ರಿಯಲ್ಲಿ ಕಡಿದ ಮರಕ್ಕೆ ಪ್ರತಿಯಾಗಿ ಸಾಕಷ್ಟು ಗಿಡಗಳನ್ನು ನೆಟ್ಟು ಪೋಷಿಸಲು ವ್ಯವಸ್ಥೆ ಮಾಡಲಾಗುವುದು. ಪರಿಸರ ಉಳಿಸುವುದಕ್ಕೆ ಆದ್ಯತೆ ನೀಡಲಾಗುವುದು. 
– ಭಾಸ್ಕರ್‌ ಕೆ.,ಮೇಯರ್ 

ಮಾಹಿತಿ ಇಲ್ಲ!
ಮರಗಳನ್ನು ಸ್ಥಳಾಂತರ ಮಾಡಲು ಸಾಕಷ್ಟು ವೆಚ್ಚ ತಗಲುತ್ತದೆ. ಆದ್ರೆ ಕದ್ರಿ ಪರಿಸರದಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.
– ಕರಿಕಳನ್‌, ಉಪ ಅರಣ್ಯ
ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ ಮಂಗಳೂರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next