ಕೋಲಾರ: ದೇಶದ ವಿವಿಧ ಭಾಗಗಳಲ್ಲಿ 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಭಾರತಾಂಬೆ ರಕ್ಷಣೆಗಾಗಿ ದುಡಿದು ಇದೀಗ ನಿವೃತ್ತಿ ಹೊಂದಿ ಏಕಕಾಲದಲ್ಲಿ ಜಿಲ್ಲೆಗೆ ಆಗಮಿಸಿದ 14ಯೋಧರನ್ನು ನಗರದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.
ಪುಷ್ಪವೃಷ್ಟಿ: ನಗರದ ನಿವೃತ್ತ ಯೋಧರ ಟ್ರಸ್ಟ್ ಹಾಗೂ ಟೀಮ್ ಯೋಧ ತಂಡದಿಂದ ಸೋಮವಾರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ವಾಪಸ್ಸಾದ 14 ಯೋಧರನ್ನು ನಗರದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಅಲ್ಲದೇ, ದಾರಿಯುದ್ದಕ್ಕೂ ನಾಗರಿಕರು ಪುಷ್ಪವೃಷ್ಟಿಯೊಂದಿಗೆ ಅವರನ್ನು ಸ್ವಾಗತಿಸಿ ದೇಶಪ್ರೇಮ ಮೆರೆದರು.
ನಗರದಲ್ಲಿ ಜಯಘೋಷಗಳೊಂದಿಗೆ ಸಾಗಿ ಬಂದ ವೀರಯೋಧರ ಅದ್ಧೂರಿ ಮೆರವಣಿಗೆ ನಂತರ ನೀರಾವರಿ ವೇದಿಕೆಯಲ್ಲಿ ಸೇರಿದ್ದು, ಅಲ್ಲಿ ಯೋಧರನ್ನು ಸನ್ಮಾನಿಸಲಾಯಿತು. ವಂದೇಮಾತರಂ ಸೋಮಶಂಕರ್ ಮಾತನಾಡಿ, ದೇಶದ ರಕ್ಷಣೆ ದೇಶಾಭಿಮಾನ ಇರುವ ವ್ಯಕ್ತಿಗಳು ಮಾತ್ರ ದೇಶಸೇವೆಗೆ ನಾಡಿನ ಗಡಿ ಕಾಯಲು ಹೋಗುತ್ತಾರೆ. ಸೈನಿಕರು ತಮ್ಮ ಮನೆ ಮಕ್ಕಳು ಊರು ಬಿಟ್ಟು ಹಗಲು ರಾತ್ರಿ ಎನ್ನದೇ ರಾಷ್ಟ್ರಕ್ಕಾಗಿ ದುಡಿಯುತ್ತಾರೆ ಎಂದರು.
ಪ್ರಾಣಾರ್ಪಣೆ: ದೇಶಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧರಾದ ಇಂತಹ ಸೈನಿಕರಲ್ಲಿ ನಮ್ಮವರು ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಇವರು ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿರುವುದು ನಮಗೆಲ್ಲಾ ಹೆಮ್ಮೆ ಎನಿಸಿದೆ. ಇಂತಹ ಯೋಧರನ್ನು ಗೌರವಿಸುವ ಭಾಗ್ಯ ಸಿಕ್ಕಿರೋದೇ ನಮಗೆ ಪುಣ್ಯ ಎಂದರು. ದೇಶದ ಗಡಿಯಲ್ಲಿ, ಅದರಲ್ಲೂ ಸಿಯಾಚಿನ್‌ನಂತಹ ಹಿಮವಿರುವ ಪ್ರದೇಶದಲ್ಲಿ ಪ್ರಾಣ ಲೆಕ್ಕಿಸದೇ ದುಡಿಯುವ ನಮ್ಮ ಯೋಧರಿಂದ ಮಾತ್ರವೇ ನಾವಿಂದು ನೆಮ್ಮದಿಯಾಗಿದ್ದೇವೆ. ಗಡಿಯಲ್ಲಿ ನುಸುಳಲು ಬರುವ ಪಾಪಿಗಳನ್ನು ತಡೆದು ದೇಶ ಕಾಯುವ ಈ ಮಹನೀಯರನ್ನು ಸನ್ಮಾನಿಸುವ ಅವಕಾಶ ನಿಜಕ್ಕೂ ಅತ್ಯಂತ ಸಂತಸದ ವಿಷಯ ಎಂದರು.
ಕೆಲಸ ಮಾಡಲು ಸಿದ್ಧ: ನಿವೃತ್ತ ಯೋಧ ಸುರೇಶ್‌ಬಾಬು ಮಾತನಾಡಿ, ಸೈನಿಕನಾಗಿ ತಾನು ಇಷ್ಟು ವರ್ಷ ತಮ್ಮ ತಂದೆ ತಾಯಿ ಮಕ್ಕಳನ್ನು ಬಿಟ್ಟು ದೇಶ ಸೇವೆ ಮಾಡಿದ್ದಕ್ಕೆ ಈಗ ನಿಜವಾದ ಗೌರವ ಸಿಕ್ಕಂತಾಗಿದೆ. ನಾವುಗಳು ಸೇನೆಯಿಂದ ಮಾತ್ರವೇ ನಿವೃತ್ತಿಯಾಗಿದ್ದು ದೇಶಸೇವೆ ಮಾಡಲು ಯಾವುದೇ ಸಂದರ್ಭದಲ್ಲಿ ಕರೆದರೂ ಮತ್ತೆ ದೇಶಕ್ಕಾಗಿ ನಾಡಿಗಾಗಿ ಕೆಲಸ ಮಾಡಲು ಸಿದ್ಧವೆಂದರು.
ಜಿಲ್ಲೆಯಲ್ಲಿ ಯುವಕರು ದೇಶ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಿಮ್ಮಂತಹ ಯುವಕರನ್ನು ಬೆನ್ನು ತಟ್ಟುವ ಕಾರ್ಯವನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ, ಯುವಕರು ಜವಾಬ್ದಾರಿ, ಛಲದಿಂದ ಮಂದೆ ಬರಬೇಕಾಗಿದೆ ಎಂದರು. ನೂರಾರು ಯುವಕರು ವಿದ್ಯಾರ್ಥಿಗಳು ಭಾರತ ಮಾತೆ, ಭಾರತ ದೇಶ, ಸೈನ್ಯದ ಜೈಕಾರ ಮೊಳಗಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರ ಟ್ರಸ್ಟ್ ಅಧ್ಯಕ್ಷ ಜಗನ್ನಾಥ್ ಉಪಾಧ್ಯಕ್ಷ ಕೃಷ್ಣಮೂರ್ತಿ ನಿವೃತ್ತ ಯೋಧ ಕೃಷ್ಣೇಗೌಡ, ನಗರಸಭೆ ಸದಸ್ಯ ಮಂಜುನಾಥ್, ನಿವೃತ್ತ ಯೋಧರ ಪೋಷಕರು ಇದ್ದರು.
ಸನ್ಮಾನಿತ ಯೋಧರು: ಕೋಲಾರದಲ್ಲಿ ಸೋಮವಾರ ನಿವೃತ್ತ ಯೋಧರಾದ ಎಸ್.ವಿ.ಮಂಜುನಾಥ್, ಸುರೇಶ್, ವಿ.ಆಂಜಿನಪ್ಪ, ಸಿ.ಎನ್.ಆನಂದ್, ವಿ.ರಮೇಶ್, ಎ.ರೀಗನ್, ಕೃಷ್ಣಮೂರ್ತಿ, ಕಾರ್ತಿಕ್, ವಿನೋದ್‌ಕುಮಾರ್, ವರುಣ್‌ಕುಮಾರ್, ಭಗೀರಥ್, ಅಶೋಕ್, ಚಿಕ್ಕ, ಭಾಸ್ಕರ್, ರಾಜಶೇಖರ್, ಶಾಂತಕುಮಾರ್ ಟೀಂ ಯೋಧ ಮತ್ತು ನಿವೃತ್ತ ಯೋಧರ ಸಂಘದ ವತಿಯಿಂದ ಸನ್ಮಾನ ಸ್ಪೀಕರಿಸಿದರು.