Advertisement

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

03:32 AM May 18, 2021 | Team Udayavani |

ಮಲ್ಪೆ : ಚಂಡಮಾರುತದ ಪ್ರಭಾವ ಜಿಲ್ಲೆಯಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಇದರಿಂದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಬಹಳ ನಷ್ಟ ಉಂಟಾಗಿದೆ. ಯಾವುದೇ ಹಾನಿ ಸಂಭವಿಸಿದರೆ ಕೂಡಲೇ ವರದಿ ಮಾಡಬೇಕು ಮತ್ತು ಜನರ ರಕ್ಷಣೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ತೌಖ್ತೆ ಚಂಡಮಾರುತದಿಂದ ಹಾನಿಗೀಡಾಗಿರುವ ಮಲ್ಪೆ ಪಡುಕರೆ ಪ್ರದೇಶಕ್ಕೆ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 60 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದ್ದು, ಅದರಂತೆ ಅವರೆಲ್ಲರೂ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ತೊಂದರೆಗೀಡಾಗುವ ಕುಟುಂಬಗಳಿಗೆ ಇಲ್ಲಿ ಎಲ್ಲ ಸೌಲಭ್ಯ ಗಳೊಂದಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಸದ್ಯ ಈ ಕೇಂದ್ರಗಳಲ್ಲಿ ಯಾರು ಕೂಡ ಉಳಿದು ಕೊಂಡಿಲ್ಲ ಎಂದರು.

ಅಧಿಕಾರಿಗಳಿಂದ ನಷ್ಟ ಅಂದಾಜು
ಹಾನಿಗೀಡಾಗಿರುವ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳ ನಷ್ಟ ಅಂದಾಜು ಮಾಡಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಬಹಳ ಕಡೆಗಳಲ್ಲಿ ಮೀನುಗಾರಿಕೆ ರಸ್ತೆಗಳು ಹಾನಿಗೀಡಾಗಿದ್ದು, ಈ ರಸ್ತೆಗಳ ಹಾನಿ ಪ್ರಮಾಣವನ್ನು ತಿಳಿಸುವಂತೆ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾದ್ಯಂತ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌, ವಿದ್ಯುತ್‌ ತಂತಿಗಳಿಗೆ ಹಾನಿಯಾಗಿ ಮೆಸ್ಕಾಂಗೆ ಭಾರೀ ನಷ್ಟ ಉಟಾಗಿದ್ದು, ಅದನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಲಾಗಿದೆ. ಕಳೆದ ಬಾರಿ ಆರು ಕೋಟಿ ರೂ.ವನ್ನು ಮೆಸ್ಕಾಂಗೆ ನೀಡಲಾಗಿದೆ. ಈ ಬಾರಿ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಲಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಕೂಡ ಹಾನಿ ಯಾಗಿದ್ದು ಕಡಲ್ಕೊರೆತದಿಂದ ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಈ ಕುರಿತು ನಷ್ಟ ಅಂದಾಜು ಮಾಡುವಂತೆ ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಕೆಲವು ಬೋಟುಗಳಿಗೆ ಹಾನಿ
ಮೀನುಗಾರಿಕಾ ಬೋಟುಗಳಿಗೆ ಹಾನಿ ಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಅದನ್ನು ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಮ್ಮಲ್ಲಿ ಆಳ ಸಮುದ್ರ ಮೀನುಗಾರಿಕೆ ತೆರಳಿದ ಯಾರು ಕೂಡ ಸಮುದ್ರ ಮಧ್ಯೆ ಸಿಲುಕಿಕೊಂಡಿಲ್ಲ. ಮಂಗಳೂರು ಬೋಟು ದುರಂತದಲ್ಲಿ ಈಜಿಕೊಂಡು ಬಂದ ಮೂವರನ್ನು ಜಿಲ್ಲೆಯಲ್ಲಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖ ಲಿಸಲಾಗಿದೆ. ಇವರೆಲ್ಲರೂ ಆರೋಗ್ಯ ವಾಗಿದ್ದಾರೆ ಎಂದರು.

Advertisement

ಜಿಲ್ಲಾಧಿಕಾರಿಗಳು ಪಡುಕರೆಯ ವೀರಾಂಜನೇಯ ಭಜನ ಮಂದಿರ ಸಮೀಪ ಹಾಗೂ ಶಾಂತಿನಗರಕ್ಕೆ ತೆರಳಿ ಹಾನಿಯಾಗಿರುವ ಪ್ರದೇಶವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ನಗರಸಭಾ ಸದಸ್ಯ ವಿಜಯ ಕುಂದರ್‌, ಸುಂದರ್‌ ಕಲ್ಮಾಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next