ಕುಂದಗೋಳ: ಕುಂದಗೋಳ ಉಪ ಚುನಾವಣೆಗೆ ಸಲ್ಲಿಸಿದ ಒಟ್ಟು 22 ನಾಮಪತ್ರ ಅಭ್ಯರ್ಥಿಗಳಲ್ಲಿ ಕೊನೆ ದಿನವಾದ ಗುರುವಾರ 14 ಜನ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಕಾರಿ ವಿ.ಪ್ರಸನ್ನ ಹೇಳಿದರು.
ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್‌ನ ಜಿ.ಡಿ.ಘೋರ್ಪಡೆ, ಚಂದ್ರಶೇಖರ ಜುಟ್ಟಲ, ವಿಶ್ವನಾಥ ಕೂಬಿಹಾಳ, ಶಿವಾನಂದ ಬೆಂತೂರ, ಸುರೇಶ ಸವಣೂರ, ಎಚ್.ಎಲ್.ನದಾಫ, ಜೆಡಿಎಸ್‌ನ ಹಜರತಲಿ ಶೇಖ ಕಣದಿಂದ ಹಿಂದೆ ಸರಿಸಲು ಸಚಿವ ಜಮೀರ ಅಹ್ಮದ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಅವರು ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಬಂಡಾಯ ಅಭ್ಯರ್ಥಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾದ್ದರಿಂದ ಸಹಜವಾಗಿ ಪೈಪೋಟಿ ಸಾಮಾನ್ಯ. ಎಲ್ಲರನ್ನು ಒಗ್ಗೂಡಿಸಿಕೊಂಡು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸುತ್ತಾರೆ ಎಂದರು. ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕ ಪ್ರಸಾದ ಅಬ್ಬಯ್ಯ, ಅರವಿಂದ ಕಟಗಿ ಇದ್ದರು.
Advertisement
ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಹಾಗೂ ಪಕ್ಷೇತರರಾದ ಕುಂದಗೋಳದ ಈಶ್ವರಪ್ಪ ಭಂಡಿವಾಡ, ಬೆಂಗಳೂರು ನಿವಾಸಿ ತುಳಸಪ್ಪ ದಾಸರ, ಹುಬ್ಬಳ್ಳಿ ಗೋಕುಲ ನಿವಾಸಿ ರಾಜು ನಾಯಕವಾಡ, ರಾಮಾಪುರದ ಶೈಲಾ ಗೋಣಿ, ನೂಲ್ವಿಯ ಸಿದ್ದಪ್ಪ ಗೋಡಿ, ಹೊಸಳ್ಳಿ ಗ್ರಾಮದ ಸೋಮಣ್ಣ ಮೇಟಿ ಅಂತಿಮವಾಗಿ ಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಸಿದ್ದ ಈರಯ್ಯ ಹಿರೇಮಠ, ಕುತುಬುದ್ದೀನ್ ಬೆಳಗಲಿ, ಶರಣ್ಣ ಕರೆಣ್ಣವರ, ಗುರುಪುತ್ರ ಕುಳ್ಳೂರ, ಜಿ.ಡಿ.ಘೋರ್ಪಡೆ, ಚಂದ್ರಶೇಖರ ಜುಟ್ಟಲ, ಮಲ್ಲಿಕಾರ್ಜುನ ಕಿತ್ತೂರ, ಯಲ್ಲಪ್ಪ ದಬಗೊಂದಿ, ವೆಂಕನಗೌಡ ಪಾಟೀಲ, ವಿಶ್ವನಾಥ ಕೂಬಿಹಾಳ, ಶಿವಾನಂದ ಬೆಂತೂರ, ಸುರೇಶ ಸವಣೂರ, ಹಜರತಲಿ ಶೇಖ, ಎಚ್.ಎಲ್.ನದಾಫ ಸೇರಿದಂತೆ 14 ಜನ ನಾಮಪತ್ರ ಹಿಂಪಡೆದಿದ್ದಾರೆ.
ಏಕಾಂಗಿಯಾಗಿ ಬಂದು ನಾಮಪತ್ರ ಹಿಂಪಡೆದ ಬೆಂತೂರ:
ನಾಮಪತ್ರ ಹಿಂಪಡೆದು ಮಾತನಾಡಿದ ಶಿವಾನಂದ ಬೆಂತೂರ, ಟಿಕೆಟ್ ಆಕಾಂಕ್ಷಿಗಳಲ್ಲಿ ನಾವು 7 ಜನರಿದ್ದು, ಪಕ್ಷದ ವರಿಷ್ಠರು ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ್ದರಿಂದ ಅಸಮಾಧಾನವಾಗಿ ನಾವೆಲ್ಲರೂ ಸೇರಿ ಒಬ್ಬರು ಕಣದಲ್ಲುಳಿಯಲು ಗಟ್ಟಿಯಾಗಿದ್ದೇವು. ಆದರೆ ಕೊನೆ ಕ್ಷಣದಲ್ಲಿ ನನ್ನೊಂದಿಗೆ ಇದ್ದವರು ಕೈ ಕೊಟ್ಟಿದ್ದರಿಂದ ತೀವ್ರ ನೋವಾಗಿದೆ. ನಾನು ಯಾರ ಮಾತು ಕೇಳಿ ನಾಮಪತ್ರ ಹಿಂಪಡೆಯುತ್ತಿಲ್ಲ. ಇನ್ನು ಮುಂದೆ ನಾನು ರಾಜಕೀಯ ನಿವೃತ್ತಿ ಬಯಸುತ್ತೇನೆ ಎಂದರು. ಈ ಚುನಾವಣೆಯಲ್ಲಿ ಯಾರಿಗೆ ಬೆಂಬಲಿಸುತ್ತೀರಿ ಎಂದು ಕೇಳಿದಾಗ ಯಾರಿಗೂ ಇಲ್ಲ ಎಂದರು.