ಕರಾಚಿ : ಬಲೂಚಿಸ್ಥಾನ ಪ್ರಾಂತ್ಯದಲ್ಲಿನ ಮುಸ್ತಾಂಗ್ ಪ್ರದೇಶದಲ್ಲಿ ಅತ್ಯಂತ ವೇಗದಿಂದ ಧಾವಿಸುತ್ತಿದ್ದ ವ್ಯಾನ್ ಒ,ದು ಎದುರಿನಲ್ಲಿ ಬರುತ್ತಿದ್ದ ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 14 ಮಂದಿ ಮಡಿದು ಇತರ 30 ಮಂದಿ ಗಾಯಗೊಂಡರೆಂದು ಪೊಲೀಸರು ಹಾಗೂ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಳುಗಳಲ್ಲಿ ಕನಿಷ್ಠ ಆರು ಮಂದಿಯ ಸ್ಥಿತಿ ಗಂಭೀರವಿರುವುದರಿಂದ ಮೃತರ ಸಂಖ್ಯೆ ಹೆಚ್ಚಲೂ ಬಹುದು ಎಂದು ಪೊಲೀಸರು ಹಾಗೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾನ್ ಅತ್ಯಂತ ವೇಗದಲ್ಲಿ ಸಾಗುತ್ತಿದ್ದುದರ ಪರಿಣಾಮವಾಗಿ ಅದರ ಚಾಲಕನಿಗೆ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿಗೆ ಅದು ನೇರವಾಗಿ ಢಿಕ್ಕಿ ಹೊಡೆಯಿತೆಂದು ಸ್ಥಳೀಯ ಪೊಲೀಸ್ ಅಧಿಕಾರಿ ಸಮದ್ ಖಾನ್ ತಿಳಿಸಿದ್ದಾರೆ.
ಕ್ವೆಟ್ಟಾದಲ್ಲಿನ ಸರಕಾರಿ ಆಸ್ಪತ್ರೆ ವೈದ್ಯರು ಈ ಅವಘಡದಲ್ಲಿ ಈ ತನಕ 14 ಮಂದಿ ಮೃತಪಟ್ಟಿರುವುದನ್ನು ಮತ್ತು 30 ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿರುವುದನ್ನು ದೃಢàಕರಿಸಿದ್ದಾರೆ,
ಪಾಕಿಸ್ಥಾನದಲ್ಲಿ ಟ್ರಾಫಿಕ್ ಸುರಕ್ಷಾ ನಿಯಮಗಳ ಅನುಷ್ಠಾನ ಅತ್ಯಂತ ಕಳಪೆ ಇರುವುದರಿಂದ ವರ್ಷಂಪ್ರತಿ ಸುಮಾರು 4,500 ಮಂದಿ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ ಎಂದು ಪಾಕ್ ಅಂಕಿ ಅಂಶ ಇಲಾಖೆ ತಿಳಿಸಿದೆ.