ಚಿತ್ರದುರ್ಗ: ಪೋಕ್ಸೊ ಕಾಯ್ದೆಯಡಿಯಲ್ಲಿ ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುರುವಾರ ರಾತ್ರಿ ಹತ್ತು ಗಂಟೆಗೆ ವಶಕ್ಕೆ ಪಡೆದುಕೊಂಡ ಪೊಲೀಸರು, ಚಳ್ಳಕೆರೆ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಸುಮಾರು ಎರಡು ತಾಸು ವಿಚಾರಣೆ ನಡೆಸಿದರು.
ಅಲ್ಲಿಂದ ರಾತ್ರಿ 12.30ಕ್ಕೆ ಜಿಲ್ಲಾ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು. ರಾತ್ರಿ 2.30ಕ್ಕೆ ಪೊಲೀಸರು ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲು ಕಾರಾಗೃಹದ ಸಿಬ್ಬಂದಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಸ್ಟೇಡಿಯಂನಲ್ಲೇ ಹಾಂಕಾಂಗ್ ಆಟಗಾರ ಕಿಂಚಿತ್ ಪ್ರೇಮ ನಿವೇದನೆ!
ನ್ಯಾಯಾಧೀಶರ ಮನೆಯಿಂದ ರಾತ್ರಿ 2.50ರ ಸುಮಾರಿಗೆ ಜಿಲ್ಲಾ ಕಾರಾಗೃಹಕ್ಕೆ ಕರೆತಂದು ಬಿಡಲಾಯಿತು. ಇಡೀ ರಾತ್ರಿ ನಡೆದ ಎಲ್ಲಾ ತನಿಖಾ ಪ್ರಕ್ರಿಯೆಗಳಿಗೆ ಶ್ರೀಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.
ವಿಚಾರಣೆಗಾಗಿ ಇಂದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.