ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಶನಿವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಮೊಹಮ್ಮದ್ ನಲಪಾಡ್ ಪರ ವಕೀಲರಾದ ಉಸ್ಮಾನ್, ಶನಿವಾರ ಬೆಳಗ್ಗೆ ಅರ್ಜಿ ಸಲ್ಲಿಸಿದ್ದು, ಘಟನೆ ನಡೆದು 70 ದಿನಗಳು ಕಳೆದರೂ ಇದುವರೆಗೂ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ 167(2) ಅಡಿಯಲ್ಲಿ ಜಾಮೀನು ಮಂಜೂರು ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಿದರು.
ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್‌ಸುಂದರ್, ಇದೊಂದು ಕೊಲೆ ಯತ್ನ ಪ್ರಕರಣ. ಯಾವುದೇ ಪ್ರಕರಣದಲ್ಲಿ ಜಾರ್ಜ್‌ಶೀಟ್ ಸಲ್ಲಿಸಲು ಕನಿಷ್ಠ 90 ದಿನಗಳ ಕಾಲಾವಕಾಶ ಇರುತ್ತದೆ. ಅದರಂತೆ, ಈ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಲು ಮೇ 18ರವರೆಗೆ ಅವಕಾಶವಿದೆ. ಆರೋಪಿಗಳು ಈ ಹಿಂದೆ ಸಲ್ಲಿಸಿದ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ವಜಾಗೊಳಿಸಿವೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮೊಹಮ್ಮದ್ ನಲಪಾಡ್‌ಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಫೆ.17ರ ತಡರಾತ್ರಿ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಮತ್ತು ಸಹಚರರು ಹಲ್ಲೆ ನಡೆಸಿದ್ದು, ಪರಿಣಾಮ ವಿದ್ವತ್ ಮಲ್ಯ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಬಳಿಕ ಮೊಹಮ್ಮದ್ ಸೇರಿ 8 ಮಂದಿ ಆರೋಪಿಗಳನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಸಂಬಂಧ ಜಾಮೀನು ಸಲ್ಲಿಸಿದ್ದ ಆರೋಪಿಗಳ ಅರ್ಜಿಯನ್ನು ಸೆಷನ್ಸ್ ಮತ್ತು ಹೈಕೋರ್ಟ್ ವಜಾಗೊಳಿಸಿತ್ತು. ಅನಂತರ ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸದೆಯೇ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಮೊಹಮ್ಮದ್ ನಲಪಾಜ್ ಇದೀಗ ಮುಂದಾಗಿದ್ದಾರೆ.