Advertisement

ಗೃಹ ಬಂಧನ ಮೀರಿದವರಿಗೆ 14 ದಿನ ಸರ್ಕಾರಿ ಆತಿಥ್ಯ!

09:23 AM May 19, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಮೇ 14ರಿಂದ 18ರ ವರೆಗೆ 353 ಜನರು ಹೋಂ ಕ್ವಾರಂಟೈನ್‌ ಉಲ್ಲಂಘಿಸಿದ್ದು, ಅವರನ್ನು ಪುನಃ 14 ದಿನಗಳ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಡಿಸಿ ದೀಪಾ ಚೋಳನ್‌ ಹೇಳಿದ್ದಾರೆ.

Advertisement

ಈಗಾಗಲೇ ಕೋವಿಡ್‌ ಸೋಂಕು ದೃಢಪಟ್ಟಿರುವ ವ್ಯಕ್ತಿಗಳೊಂದಿಗೆ ಎರಡನೇ ಹಂತದ (ಸೆಕೆಂಡರಿ) ಸಂಪರ್ಕ ಹೊಂದಿರುವವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಪೈಕಿ ಮೇ 14ರಂದು 76, ಮೇ 15ರಂದು 63, ಮೇ 16ರಂದು 65, ಮೇ 17ರಂದು 75 ಹಾಗೂ ಮೇ 18ರಂದು 74 ಸೇರಿ ಒಟ್ಟು 353 ಜನರು ಹೋಂ ಕ್ವಾರಂಟೈನ್‌ ಉಲ್ಲಂಘಿಸಿರುವುದು ದಾಖಲಾಗಿದೆ. ಅಂತಹ ವ್ಯಕ್ತಿಗಳನ್ನು ಪುನಃ ಸರ್ಕಾರದ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಕ್ವಾರಂಟೈನ್‌ ನಲ್ಲಿರುವ ವ್ಯಕ್ತಿಗಳು ಮನೆಗಳಿಂದ ಹೊರಬಂದರೆ ಸುತ್ತಮುತ್ತಲಿನ ಸಾರ್ವಜನಿಕರೂ ಸಹಾಯವಾಣಿ 1077 ಅಥವಾ ವಾಟ್ಸ್‌ಆ್ಯಪ್‌: 9449847641/46 ಮೂಲಕ ಮಾಹಿತಿ ನೀಡಬಹುದು.

ಕೋವಿಡ್‌ ಸೋಂಕಿತರೊಂದಿಗೆ ದ್ವಿತೀಯ ಹಂತದ ಸಂಪರ್ಕ ಹೊಂದಿರುವವರು ಹಾಗೂ ರಾಜ್ಯದ ಬೇರೆ ಜಿಲ್ಲೆಗಳಿಂದ ಆಗಮಿಸಿರುವವರನ್ನು ಹೋಂ ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಜಿಯೋ ಫೆನ್ಸಿಂಗ್‌ ಅಳವಡಿಸಿ ಇವರ ಮೇಲೆ ಕಣ್ಗಾವಲು ಇರಿಸಲಾಗಿದೆ. ಯಾರಾದರೂ ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಹೊರಬಂದರೆ ತಕ್ಷಣ ಮಾಹಿತಿ ಲಭ್ಯವಾಗುತ್ತಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು ಕಡ್ಡಾಯವಾಗಿ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ ಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೊರ ರಾಜ್ಯಗಳಿಂದ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಕೃಷಿ ವಿವಿ ಆವರಣದಲ್ಲಿನ ನೋಂದಣಿ ಮತ್ತು ವೈದ್ಯಕೀಯ ತಪಾಸಣೆ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್‌ಗೆ ಅಥವಾ ಸ್ವಂತ ವೆಚ್ಚದಲ್ಲಿ ಹೋಟೆಲ್‌ ಕ್ವಾರಂಟೈನ್‌ ಆಯ್ದುಕೊಳ್ಳಬಹುದು. ಇದನ್ನು ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next