ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವರ್ಷದ ಹಿಂದೆ ದೇವಸ್ಥಾನದ ಕಾರಿಡಾರ್ ಉದ್ಘಾಟಿಸಿದ ಬಳಿಕ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ 14 ಕೋಟಿಗಿಂತಲೂ ಅಧಿಕ ಭಕ್ತರು ಭೇಟಿ ನೀಡಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
ಇದನ್ನೂ ಓದಿ:Kalaburagi; ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಸೊಸೆ – ಮಾವ ಸ್ಥಳದಲ್ಲೇ ಸಾವು
ಕಾಶಿ ವಿಶ್ವನಾಥ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಭೂಷಣ್ ಸಿಂಗ್ ನ್ಯೂಸ್ 18ಗೆ ನೀಡಿರುವ ಸಂದರ್ಶನಲ್ಲಿ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಾರಿಡಾರ್ ಆರಂಭಗೊಂಡ ನಂತರ ಕಾಶಿ ವಿಶ್ವನಾಥ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಐದು ಪಟ್ಟು ಹೆಚ್ಚಳವಾಗಿದೆ. ಈ ಮೊದಲು ಪ್ರತಿದಿನ 20,000ದಿಂದ 25,000 ಭಕ್ತರು ಮಾತ್ರ ಭೇಟಿ ನೀಡುತ್ತಿದ್ದರು. ಆದರೆ ಈಗ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ ಎಂದು ಸಿಂಗ್ ತಿಳಿಸಿದರು.
ಶನಿವಾರವೂ ಕೂಡಾ ದೇವಸ್ಥಾನದಲ್ಲಿ ಭಾರೀ ಸಂಖ್ಯೆಯ ಭಕ್ತರು ನೆರೆದಿದ್ದರು. ಅದೇ ರೀತಿ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ನಂದಿ ವಿಗ್ರಹವನ್ನು ಹೆಚ್ಚಿನ ಜನರು ವೀಕ್ಷಿಸುತ್ತಿರುವುದು ಮುಖ್ಯಸಂಗತಿಯಾಗಿದೆ.
ಜ್ಞಾನವಾಪಿ ಮಸೀದಿಯ ಕೆಳ ಅಂತಸ್ತಿನಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿತ್ತು. ಆದರೆ ಹೈಕೋರ್ಟ್ ಕೂಡಾ ಅದಕ್ಕೆ ಸಮ್ಮತಿ ಸೂಚಿಸಿದೆ. 1990ರಲ್ಲಿ ಉತ್ತರಪ್ರದೇಶ ಅಂದಿನ ಸಿಎಂ ಮುಲಾಯಂ ಸಿಂಗ್ ಯಾದವ್ ಪೂಜೆ ನಡೆಸಬಾರದೆಂದು ಮೌಖಿಕ ಆದೇಶ ನೀಡಿದ್ದರು. ಇದೀಗ ಕೋರ್ಟ್ ಹಿಂದೂಗಳಿಗೆ ಪೂಜೆ ನೆರವೇರಿಸಲು ಅವಕಾಶ ನೀಡಿದ್ದರಿಂದ ಜ್ಞಾನವಾಪಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದಾಗಿ ವರದಿ ವಿವರಿಸಿದೆ.
ಆಗಸ್ಟ್ ನಲ್ಲಿ ಕಾಶಿ ವಿಶ್ವನಾಥ ದೇವಾಲಯಕ್ಕೆ 95 ಲಕ್ಷ ಭಕ್ತರು ಭೇಟಿ ನೀಡಿರುವುದಾಗಿ ಸಿಂಗ್ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 14.12 ಕೋಟಿ ಭಕ್ತರು ಭೇಟಿ ನೀಡಿರುವುದಾಗಿ ಸಿಂಗ್ ತಿಳಿಸಿದ್ದಾರೆ.