ಗುವಾಹಟಿ: 20 ವರ್ಷಗಳ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಮರಳಿ ಅಧಿಕಾರವನ್ನು ಪಡೆದಿರುವುದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಅಸ್ಸಾಂನ 11 ಜಿಲ್ಲೆಗಳಿಂದ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ (ಆಗಸ್ಟ್ 21) ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1350 ಪ್ರಕರಣ ಪತ್ತೆ|1648 ಸೋಂಕಿತರು ಗುಣಮುಖ
ಅಸ್ಸಾಂನ 11 ಜಿಲ್ಲೆಗಳಿಂದ ಈವರೆಗೆ 14 ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ತೇಝ್ ಪುರ್ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಯೂ ಸೇರಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದೇಶವನ್ನು ವಶಪಡಿಸಿಕೊಂಡಿರುವುದಕ್ಕೆ ಕೆಲವರು ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಭಾರತವನ್ನು ಟೀಕಿಸಿದ್ದರು. ಅಲ್ಲದೇ ರಾಷ್ಟ್ರೀಯ ಮಾಧ್ಯಮಗಳು ತಾಲಿಬಾನ್ ಅನ್ನು ಬೆಂಬಲಿಸುವುದಿಲ್ಲ. ಇದರ ಪರಿಣಾಮ ಕೋಮು ಘರ್ಷಣೆ ನಡೆಯಲು ಕಾರಣವಾಗಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಾಗಿ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣದ ಮೇಲೆ ಸೂಕ್ಷ್ಮ ನಿಗಾ ವಹಿಸಿದ್ದ ಅಸ್ಸಾಂ ಪೊಲೀಸ್ ಸೈಬರ್ ಸೆಲ್ ತಂಡ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದೆ. ತಾಲಿಬಾನ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವ್ಯಕ್ತಪಡಿಸುವ ಮೂಲಕ ದೇಶದ ಭದ್ರತೆಗೆ ಧಕ್ಕೆ ತಂದವರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ವೈಯೊಲೆಟ್ ಬರುವಾ ತಿಳಿಸಿದ್ದಾರೆ.