ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣ, ಪತ್ತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಉತ್ತಮ ಪೊಲೀಸ್ ಆಡಳಿತವನ್ನು ನೀಡುವ ನಿಟ್ಟಿನಲ್ಲಿ ಇತ್ತೀಚೆಗೆ 14 ಮಂದಿ ಹೆಚ್ಚುವರಿ ಸಬ್ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ.
ಈ ಪೈಕಿ ಉಳ್ಳಾಲ ಪೊಲೀಸ್ ಠಾಣೆಗೆ ಅತ್ಯಧಿಕ ಎಂದರೆ 4 ಹೆಚ್ಚುವರಿ ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕವಾಗಿದೆ. ಇದರೊಂದಿಗೆ ಈ ಪೊಲೀಸ್ ಠಾಣೆಯ ಒಟ್ಟು ಸಬ್ ಇನ್‌ಸ್ಪೆಕ್ಟರ್‌ಗಳ ಬಲ 6ಕ್ಕೇರಿದೆ.
ಕೊಣಾಜೆ ಠಾಣೆಗೆ 2, ಬಂದರ್, ಕದ್ರಿ, ಬರ್ಕೆ, ಕಾವೂರು, ಬಜಪೆ, ಸುರತ್ಕಲ್, ಮಂಗಳೂರು ಗ್ರಾಮಾಂತರ, ಮೂಡುಬಿದಿರೆ ಪೊಲೀಸ್ ಠಾಣೆಗಳಿಗೆ ತಲಾ ಓರ್ವ ಸಬ್ ಇನ್‌ಸ್ಪೆಕ್ಟರ್‌ಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಮೂಡುಬಿದಿರೆ ಠಾಣೆಯಲ್ಲಿ ಪಿಎಸ್‌ಐ ಇರಲಿಲ್ಲ. ಇನ್‌ಸ್ಪೆಕ್ಟರ್ ಮಾತ್ರ ಇದ್ದರು. ಇದೀಗ ಓರ್ವ ಪಿಎಸ್‌ಐ ನೇಮಕಗೊಂಡಿದ್ದಾರೆ. ಉರ್ವ ಮತ್ತು ಮಹಿಳಾ (ಪಾಂಡೇಶ್ವರ) ಠಾಣೆಗಳಲ್ಲಿ ಈ ಹಿಂದೆ ತಲಾ ಓರ್ವ ಪಿಎಸ್‌ಐ ಇದ್ದು, ಈ ಠಾಣೆಗಳಿಗೆ ಹೆಚ್ಚುವರಿ ಪಿಎಸ್‌ಐ ನೇಮಕ ಮಾಡಿಲ್ಲ. ಪಾಂಡೇಶ್ವರ ಠಾಣೆಯಲ್ಲಿ ಈ ಹಿಂದೆ 3 ಜನ ಪಿಎಸ್‌ಐಗಳಿದ್ದು, ಅಲ್ಲಿಗೂ ಹೆಚ್ಚುವರಿ ಪಿಎಸ್‌ಐ ನೇಮಕ ಮಾಡಲಾಗಿಲ್ಲ.
ಪ್ರಸ್ತುತ ಉಳ್ಳಾಲದಲ್ಲಿ 6 ಮಂದಿ, ಪಾಂಡೇಶ್ವರ, ಬಂದರ್, ಗ್ರಾಮಾಂತರ, ಕೊಣಾಜೆ ಠಾಣೆಗಳಲ್ಲಿ ತಲಾ 3 ಮಂದಿ, ಕದ್ರಿ, ಬರ್ಕೆ, ಕಂಕನಾಡಿ ನಗರ, ಪಣಂಬೂರು, ಕಾವೂರು, ಬಜಪೆ, ಸುರತ್ಕಲ್, ಮೂಲ್ಕಿ, ಟ್ರಾಫಿಕ್ ಉತ್ತರ, ಟ್ರಾಫಿಕ್ ದಕ್ಷಿಣ, ಟ್ರಾಫಿಕ್ ಪೂರ್ವ ಮತ್ತು ಟ್ರಾಫಿಕ್ ಪಶ್ಚಿಮ ಠಾಣೆಗಳಲ್ಲಿ ತಲಾ ಇಬ್ಬರು, ಉರ್ವ, ಮಹಿಳಾ ಮತ್ತು ಮೂಡುಬಿದಿರೆ ಠಾಣೆಗಳಲ್ಲಿ ತಲಾ ಓರ್ವ ಪಿಎಸ್‌ಐಗಳು ಇರುವಂತಾಗಿದೆ.
ಅಂದರೆ ಈಗ ಪೊಲೀಸ್ ಕಮಿಷನರೆಟ್‌ನ ಒಟ್ಟು 20 ವಿವಿಧ ಪೊಲೀಸ್ ಠಾಣೆಗಳು 45 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳನ್ನು ಹೊಂದಿದಂತಾಗಿದೆ. ಈ ಹಿಂದೆ ಒಟ್ಟು 31 ಜನ ಪಿಎಸ್‌ಐಗಳಿದ್ದರು.
ಸೂಕ್ಷ್ಮ , ವಿಶಾಲ ಪ್ರದೇಶ
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿ ಬಹಳಷ್ಟು ದೊಡ್ಡದಾಗಿದ್ದು, ಈ ಪ್ರದೇಶದಲ್ಲಿ ಇತರ ಎಲ್ಲ ಠಾಣೆಗಳಿಗಿಂತ ಜನಸಂಖ್ಯೆ ಜಾಸ್ತಿ ಇದೆ. ಅಲ್ಲದೆ ಇದು ಸೂಕ್ಷ್ಮಪ್ರದೇಶ ಕೂಡಾ ಆಗಿದೆ. ಅದನ್ನು ಗಮನಿಸಿ ಈ ಪೊಲೀಸ್ ಠಾಣೆಗೆ 6 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ
- ಡಾ | ಹರ್ಷ ಪಿ.ಎಸ್., ಮಂಗಳೂರು ಪೊಲೀಸ್ ಆಯುಕ್ತರು