Advertisement

13th ODI World Cup ಕ್ರಿಕೆಟ್‌ ಪಂದ್ಯಾವಳಿಗೆ ಇಂದು ಚಾಲನೆ

11:32 PM Oct 04, 2023 | Team Udayavani |

ಅಹ್ಮದಾಬಾದ್‌: ಕ್ರಿಕೆಟ್‌ ಲೋಕದ ಕಣ್ಣೆಲ್ಲ ಭಾರತದ ಮೇಲೆ ನೆಟ್ಟಿದೆ. 13ನೇ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪರ್ವಕ್ಕೆ ಗುರುವಾರ ಮಧ್ಯಾಹ್ನ ವಿಶ್ವದ ಅತೀ ದೊಡ್ಡ ಕ್ರೀಡಾಂಗಣವಾದ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಇಂಗ್ಲೆಂಡ್‌-ನ್ಯೂಜಿಲೆಂಡ್‌ ತಂಡಗಳು ಚಾಲನೆ ನೀಡಲಿವೆ. ಈ ಕ್ಷಣದೊಂದಿಗೆ ಗರಿಗೆದರುವ ಕ್ರಿಕೆಟ್‌ ಕೌತುಕ ಹಂತಹಂತವಾಗಿ ಉತ್ತುಂಗಕ್ಕೆ ಏರಲಿದೆ. ನ.19ರ ತನಕ ಲೋಕವೆಲ್ಲ ಕ್ರಿಕೆಟ್‌ಮಯ!
ಇದು ಭಾರತ ಆತಿಥ್ಯದಲ್ಲಿ ನಡೆಯುವ 4ನೇ ವಿಶ್ವಕಪ್‌ ಪಂದ್ಯಾವಳಿಯಾದರೂ ಭಾರತ ಏಕಾಂಗಿಯಾಗಿ ನಡೆಸಿಕೊಡುತ್ತಿರುವ ಮೊದಲ ವಿಶ್ವಕಪ್‌. ಸಂಪ್ರದಾಯದಂತೆ ಆತಿಥೇಯ ತಂಡವೇ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಇಲ್ಲಿ ಕಳೆದ ಸಲದ ಫೈನಲಿಸ್ಟ್‌ ತಂಡಗಳೆರಡು ಎದುರಾಗುತ್ತಿರುವುದು ವಿಶೇಷ.

Advertisement

ಇಂಗ್ಲೆಂಡ್‌ ಹಾಲಿ ಚಾಂಪಿಯನ್‌
ಇಂಗ್ಲೆಂಡ್‌ ಬರೋಬ್ಬರಿ 44 ವರ್ಷಗಳ ಬಳಿಕ ವಿಶ್ವಕಪ್‌ ಎತ್ತಿರುವ ಹಾಲಿ ಚಾಂಪಿಯನ್‌. ಅದೂ ಅದೃಷ್ಟದ ಬಲದಿಂದ ಕಪ್‌ ಎತ್ತಿದ ತಂಡ. 2019ರ ಫೈನಲ್‌ ಟೈ ಆದಾಗ, ಸೂಪರ್‌ ಓವರ್‌ ಕೂಡ ಟೈ ಆದಾಗ ಗರಿಷ್ಠ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್‌ ಕೈಗೆ ಕಪ್‌ ನೀಡಲಾಗಿತ್ತು. ನ್ಯೂಜಿಲೆಂಡ್‌ ಈ ಎಡವಟ್ಟು ನಿಯಮಕ್ಕೆ ಈಗಲೂ ದುಃಖಪಡುತ್ತಿರಬಹುದು. ಹೀಗಾಗಿ ಈ ಬಾರಿಯ ಆರಂಭಿಕ ಪಂದ್ಯದಲ್ಲೇ ಸೇಡು ತೀರಿಸಿಕೊಂಡರೆ ಒಂದು ಹಂತದ ನೋವನ್ನು ಮರೆಯಬಹುದು.

ಕಿವೀಸ್‌ಗೆ ಆರಂಭಿಕ ಆಘಾತ
ಸತತ 2 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಫೈನಲ್‌ ಪ್ರವೇಶಿಸಿಯೂ ಕಪ್‌ ಗೆಲ್ಲಲಾಗದ ನತದೃಷ್ಟ ತಂಡ ಈ ನ್ಯೂಜಿಲೆಂಡ್‌. ಇಲ್ಲಿ ಕೂಡ ಆರಂಭದಲ್ಲೇ ಗಾಯದ ಹೊಡೆತಕ್ಕೆ ಸಿಲುಕಿದೆ. ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಪ್ರಧಾನ ವೇಗಿ ಟಿಮ್‌ ಸೌದಿ ಇಬ್ಬರೂ ಪೂರ್ಣ ಪ್ರಮಾಣದ ಫಿಟ್‌ನೆಸ್‌ ಹೊಂದಿಲ್ಲ. ಈ ಅನುಭವಿಗಳಿಬ್ಬರೂ ಉದ್ಘಾಟನಾ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಕೀಪರ್‌ ಟಾಮ್‌ ಲ್ಯಾಥಂ ಅವರಿಗೆ ತಂಡವನ್ನು ಮುನ್ನಡೆಸುವ ಯೋಗ ಲಭಿಸಿದೆ.

ಡೆವೋನ್‌ ಕಾನ್ವೇ-ವಿಲ್‌ ಯಂಗ್‌ ಅವರ ಓಪನಿಂಗ್‌ ಮೇಲೆ ನ್ಯೂಜಿಲೆಂಡ್‌ನ‌ ದೊಡ್ಡ ಮೊತ್ತದ ಯೋಜತೆ ಕಾರ್ಯಗತಗೊಳ್ಳಬೇಕಿದೆ. ಕಾನ್ವೇ ಕಿವೀಸ್‌ನ ಕೀ ಬ್ಯಾಟರ್‌. ಯಂಗ್‌ ಈ ವರ್ಷದ 14 ಏಕದಿನ ಪಂದ್ಯಗಳಲ್ಲಿ 578 ರನ್‌ ಪೇರಿಸಿ ಉತ್ತಮ ಲಯದಲ್ಲಿದ್ದಾರೆ.

ವಿಲಿಯಮ್ಸನ್‌ ಗೈರು ಮಧ್ಯಮ ಕ್ರಮಾಂಕಕ್ಕೆ ಬಿದ್ದ ದೊಡ್ಡ ಹೊಡೆತ. ಲ್ಯಾಥಂ ಫಾರ್ಮ್ ಗಮನಾರ್ಹ ಮಟ್ಟದಲ್ಲಿಲ್ಲ. ಈ ಎಡಗೈ ಬ್ಯಾಟರ್‌ 2023ರ 17 ಏಕದಿನದಲ್ಲಿ ಕೇವಲ 3 ಅರ್ಧಶತಕ ಹೊಡೆದಿದ್ದಾರೆ. ಆದರೆ ಡ್ಯಾರಿಲ್‌ ಮಿಚೆಲ್‌, ಜೇಮ್ಸ್‌ ನೀಶಮ್‌, ಗ್ಲೆನ್‌ ಫಿಲಿಪ್ಸ್‌, ಮಾರ್ಕ್‌ ಚಾಪ್‌ಮನ್‌ ಸ್ಟ್ರೆಂತ್‌ ಬೂಸ್ಟರ್‌ಗಳೆಂಬುದರಲ್ಲಿ ಅನುಮಾನವಿಲ್ಲ. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಲ್ಲ ರಚಿನ್‌ ರವೀಂದ್ರ ಮ್ಯಾಚ್‌ ಟರ್ನರ್‌ ಎನಿಸಿಕೊಳ್ಳಬಲ್ಲರು. ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 346 ರನ್‌ ಬೆನ್ನಟ್ಟಿಕೊಂಡು ಹೋದ ನ್ಯೂಜಿಲೆಂಡ್‌ 5 ವಿಕೆಟ್‌ಗಳಿಂದ ಜಯಿಸಿದ್ದು ಎದುರಾಳಿಗಳ ಪಾಲಿಗೊಂದು ಎಚ್ಚರಿಕೆಯ ಗಂಟೆ. ಇಲ್ಲಿ ಆರಂಭಿಕನಾಗಿ ಇಳಿದ ರವೀಂದ್ರ 97 ರನ್‌ ಕೊಡುಗೆ ಸಲ್ಲಿಸಿದ್ದರು.

Advertisement

ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್, ಲಾಕೀ ಫ‌ರ್ಗ್ಯುಸನ್‌ ಕಿವೀಸ್‌ನ ವೇಗದ ಅಸ್ತ್ರವಾಗಿದ್ದಾರೆ. ಉಳಿದಂತೆ ಪಕ್ಕಾ ಆಲ್‌ರೌಂಡರ್‌ಗಳ ದೊಡ್ಡ ಪಡೆಯೊಂದು ಇಲ್ಲಿದೆ. ಇವರೆಲ್ಲ ನಿರ್ಣಾಯಕ ಹಂತದಲ್ಲಿ ಕ್ಲಿಕ್‌ ಆದರೆ ನ್ಯೂಜಿಲೆಂಡ್‌ ತನ್ನ ಇತಿಮಿತಿಯಲ್ಲಿ ಅಚ್ಚರಿಯ ಫ‌ಲಿತಾಂಶ ದಾಖಲಿಸಬಲ್ಲದು.

ವಿಶ್ವದ ಸುದೀರ್ಘ‌ ಬ್ಯಾಟಿಂಗ್‌ ಲೈನ್‌ಅಪ್‌!
ಅಹ್ಮದಾಬಾದ್‌ ಟ್ರ್ಯಾಕ್‌ ಬ್ಯಾಟಿಂಗ್‌ಗೆ ಸಹಕರಿಸುತ್ತಿರುವ ಸ್ಪಷ್ಟ ಸೂಚನೆ ಇದೆ. ಆಗ ವಿಶ್ವದಲ್ಲೇ ಅತೀ ದೊಡ್ಡ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವ, ನಿಂತು ಆಡುವ, ದೊಡ್ಡ ಜತೆಯಾಟ ನಡೆಸುವ, ವೈವಿಧ್ಯಮಯ ಆಟಗಾರರನ್ನು ಹೊಂದಿರುವ ಆಂಗ್ಲರ ಪಡೆಗೆ ಬಂಪರ್‌ ಲಾಭವಾದೀತು. ಬಟ್ಲರ್‌, ರೂಟ್‌, ಬೇರ್‌ಸ್ಟೊ, ಬ್ರೂಕ್‌, ಲಿವಿಂಗ್‌ಸ್ಟೋನ್‌, ಮಲಾನ್‌, ಸ್ಟೋಕ್ಸ್‌… ಇಷ್ಟೇ ಸಾಕಾ, ಇನ್ನೂ ಬೇಕಾ ಎಂಬ ರೀತಿಯಲ್ಲಿದೆ ಆಂಗ್ಲರ ಬ್ಯಾಟಿಂಗ್‌ ಸರದಿ. ಎಲ್ಲರೂ ಏಕಾಂಗಿಯಾಗಿ ಮ್ಯಾಚ್‌ ಟರ್ನ್ ಮಾಡಬಲ್ಲ ಸಾಹಸಿಗರು. ಇನ್ನು ಆಲ್‌ರೌಂಡರ್-ಮೊಯಿನ್‌ ಅಲಿ, ಸ್ಯಾಮ್‌ ಕರನ್‌, ಕ್ರಿಸ್‌ ವೋಕ್ಸ್‌ ಈ ಪಟ್ಟಿಯಲ್ಲಿದ್ದಾರೆ. ವುಡ್‌, ವಿಲ್ಲಿ, ಟಾಪ್ಲಿ, ಅಟಿನ್ಸನ್‌ ಬೌಲಿಂಗ್‌ ವಿಭಾಗದ ಪ್ರಮುಖರು. ಇಂಥದೊಂದು ಬಲಿಷ್ಠ, ಸಶಕ್ತ ಆಂಗ್ಲ ಪಡೆಯನ್ನು ಕಟ್ಟಿಹಾಕುವುದು ಸುಲಭವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next