Advertisement

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

09:41 PM Mar 03, 2022 | Team Udayavani |

ಬೆಂಗಳೂರು: ಕನ್ನಡದ ಮೊದಲ ಟಾಕಿ ಚಿತ್ರ ಸತಿ ಸುಲೋಚನೆ ಬಿಡುಗಡೆಯಾದ ಮಾ.3ರನ್ನು “ವಿಶ್ವ ಕನ್ನಡ ಸಿನಿಮಾ ದಿನ’ವಾಗಿ ಮುಖ್ಯ ಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಘೋಷಿಸಿದರು.

Advertisement

ನಗರದ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಗುರುವಾರ ಹಮ್ಮಿಕೊಂಡ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಹುಟ್ಟೂರು ಕಣಗಾಲ್‌ ನಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆ ಸ್ಮಾರಕವಾಗಿ ರೂಪಿಸಲು ಹಾಗೂ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ವಾಮ್ಯದ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದಲ್ಲಿ ಚಿತ್ರ ಮಂದಿರವನ್ನು ನಿರ್ಮಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಈ ಹಿಂದೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಘೋಷಣೆ ಮಾಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ 2023-24ರಲ್ಲಿ ಮೈಸೂರಿನಲ್ಲಿ ಚಲನಚಿತ್ರ ನಗರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಕನ್ನಡ ಚಿತ್ರರಂಗವನ್ನು ಉಳಿಸಲು ಹೊಸ ತಂತ್ರಜ್ಞಾನ ಬಳಕೆ ಹಾಗೂ ಸ್ಥಳೀಯ ಪ್ರತಿಭೆಗೆ ಅವಕಾಶ ಲಭಿಸಲು ರಾಜ್ಯ ಸರ್ಕಾರ ಈ ದಿಕ್ಕಿನಲ್ಲಿ ಕನ್ನಡ ಚಿತ್ರರಂಗ ಹಿರಿಯರ ಜತೆ ಸೇರಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಚಿತ್ತೋತ್ಸವವನ್ನು ನಮ್ಮ ಅಧಿಕಾರಿಗಳ ಕಾರ್ಯಕ್ಷಮತೆಯಿಂದ ಕೇವಲ 35 ದಿನಗಳಲ್ಲಿ ಸಿನಿಮಾ ಹಬ್ಬ ಮಾಡುವ ಕಾರ್ಯಕ್ರಮ ಕಾರ್ಯಗತವಾಗಿದೆ. ದೇಶದಲ್ಲಿ ಹೊಸದಿಲ್ಲಿ , ಕೋಲ್ಕತಾ, ಗೋವಾ, ಕೇರಳ, ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಆ ಪೈಕಿ ಮುಂದಿನ ದಿನದಲ್ಲಿ ಬೆಂಗಳೂರು ಮೊದಲ ಸ್ಥಾನಕ್ಕೆ ಪಡೆಯುವಂತಾಗಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ನಡೆದರೆ ಕನ್ನಡ ಚಿತ್ರಗಳಿಗೆ ಅವಕಾಶ ಹೆಚ್ಚಲಿದೆ ಎಂದು ಹೇಳಿದರು.

ನಟ ದರ್ಶನ್‌ ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ನಟಿ ಡಾ.ಭಾರತಿ ವಿಷ್ಣುವರ್ಧನ್‌, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪ್ರಿಯದರ್ಶನ್‌, ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌, ತೋಟಗಾರಿಕಾ ಸಚಿವ ಮುನಿರತ್ನ ಮಾತನಾಡಿದರು.

Advertisement

ಕರ್ನಾಟಕ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಅಶ್ವಿ‌ನಿ ಪುನೀತ್‌ ರಾಜ್‌ ಕುಮಾರ್‌, ಮುಖ್ಯಮಂತ್ರಿಗಳ ಪ್ರ. ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹರ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್‌. ಜಯರಾಜ್‌ ಉಪಸ್ಥಿತರಿದ್ದರು.

ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ  :

ರಾಜ್ಯ ಸರ್ಕಾರದಿಂದ ಈ ಹಿಂದೆ ಘೋಷಣೆ ಮಾಡಿದಂತೆ ಪುನೀತ್‌ ರಾಜ್‌ ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ವಿತರಿಸಲಿದೆ. ಈ ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿನ ಬಸವರಾಜ್‌ ಬೊಮ್ಮಾಯಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಮಯ ನಟ ದರ್ಶನ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೇಳೆ ಸಭೀಕರು ಡಿ-ಬಾಸ್‌ ಎನ್ನುವ ಘೋಷಣೆ ಹಾಕಿದ್ದು, ತದನಂತರ ಸಿಎಂ ಅವರು ಮಾತನಾಡಲು ಪ್ರಾರಂಭಿಸಿದರೂ, ಪ್ರೇಕ್ಷಕರು ಘೋಷಣೆ ಹಾಕುವುದು ನಿಲ್ಲಿಸದ ಕಾರಣ ಭಾಷಣ ಅರ್ಧದಲ್ಲಿ ಬಿಟ್ಟು ಆಸನ ಸ್ವೀಕರಿಸಿದರು. ಈ ವೇಳೆ ದರ್ಶನ ಅಭಿಮಾನಿಗಳನ್ನು “ರಾಜ್ಯದ ಉನ್ನತವಾದ ಸ್ಥಾನದಲ್ಲಿರುವ ಮಹಾನ್‌ ವ್ಯಕ್ತಿ ಮಾತನಾಡುವ ಗೌರವಿಸುವುದು ಎಲ್ಲರ ಜವಾಬ್ದಾರಿ’ಎಂದು ಹೇಳುತ್ತಿದ್ದಂತೆ ಸಭೀಕರು ಮೌನವಹಿಸಿದರು. ಅನಂತರ ಸಿಎಂ ಅವರು ಮತ್ತೆ ಭಾಷಣವನ್ನು ಪ್ರಾರಂಭಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next