Advertisement

1,383 ಕೋಟಿ ರೂ. ರೈಲು ಯೋಜನೆ ನನೆಗುದಿಗೆ

03:11 PM Oct 25, 2019 | Suhan S |

ಚಾಮರಾಜನಗರ: ಬೆಂಗಳೂರಿನ ಹೆಜ್ಜಾಲ-ಕನಕಪುರಮಳ್ಳವಳ್ಳಿ-ಕೊಳ್ಳೇಗಾಲ ಮಾರ್ಗ ಚಾಮರಾಜ ನಗರ ಸಂಪರ್ಕಿಸುವ 142 ಕಿ.ಮೀ. ದೂರದ, 1383 ಕೋಟಿ ರೂ. ವೆಚ್ಚದ ರೈಲ್ವೆ ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದೆ.

Advertisement

ಮೂಲತಃ ಈ ಯೋಜನೆ ಬೆಂಗಳೂರಿನಿಂದ ಚಾಮರಾಜನಗರ ಮಾರ್ಗ ತಮಿಳುನಾಡಿನ ಸತ್ಯ ಮಂಗಲಕ್ಕೆ ರೈಲ್ವೆ ಮಾರ್ಗ ಸಂಪರ್ಕ ಕಲ್ಪಿಸುವ ಯೋಜ ನೆಯಾಗಿತ್ತು. ಇದರ ದೂರ 260 ಕಿ.ಮೀ. ಸತ್ಯಮಂಗಲ ಅರಣ್ಯದಲ್ಲಿ ರೈಲ್ವೆ ಮಾರ್ಗ ಹಾಯು ವುದರಿಂದ ತಮಿಳುನಾಡು ಮತ್ತು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಈ ಮಾರ್ಗಕ್ಕೆ ಒಪ್ಪಿಗೆ ನೀಡಲಿಲ್ಲ. ಮಾರ್ಗದ ನವೀಕರಣ: ಹೀಗಾಗಿ ಇದನ್ನು ಹೆಜ್ಜಾಲ ಚಾಮರಾಜನಗರ ಮಾರ್ಗವನ್ನಾಗಿ ನವೀಕರಿಸಲಾಯಿತು. ಇದಕ್ಕಾಗಿ ಅಂದಿನ ಸಂಸದ ಆರ್‌. ಧ್ರುವ ನಾರಾಯಣ ಅವರು 2012-13ರಲ್ಲಿ ಕೇಂದ್ರ ಸರ್ಕಾರ ಹಾಗೂ ಅಂದಿನ ರೈಲ್ವೆ ಸಚಿವ ಮಲ್ಲಿ ಕಾರ್ಜುನ ಖರ್ಗೆ ಅವರಿಗೆ ಈ ಮಾರ್ಗದ ಬಗ್ಗೆ ಮನವರಿಕೆ ಮಾಡಿಕೊಟ್ಟು ಯೋಜನೆ ಮಾರ್ಪಾಡು ಮಾಡಲು ಶ್ರಮಿಸಿದ್ದರು.

ತದನಂತರ ರೈಲ್ವೆ ಮಂಡಳಿ ಈ ಮಾರ್ಗಕ್ಕೆ ಅನುಮೋದನೆ ನೀಡಿ, ಮಾರ್ಗದ ಸರ್ವೆ ಕಾರ್ಯ ನಡೆಸಿತ್ತು. ಅದರ ಫ‌ಲವಾಗಿ 2013ರಲ್ಲಿ ಕೇಂದ್ರ ಸರ್ಕಾರ 1382.78 ಕೋಟಿ ರೂ. ಹಣವನ್ನು ಮೊದಲ ಹಂತವಾಗಿ ಮಂಜೂರು ಮಾಡಿತ್ತು. ಯೋಜನೆ ಒಟ್ಟು ವೆಚ್ಚದಲ್ಲಿ ಶೇ.50ರಷ್ಟು ಹಣವನ್ನು ಹಾಗೂ ಇದಕ್ಕೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕೆಂದು ರೈಲ್ವೆ ಇಲಾಖೆ ತಿಳಿಸಿತ್ತು. ಪ್ರಥಮ ಕಂತಿನಲ್ಲಿ 18 ಕೋಟಿ ರೂ. ಹಣ ಸಹ ಯೋಜನೆಗೆ ಬಿಡುಗಡೆಯಾಗಿತ್ತು. 2014ರ ಡಿಸೆಂಬರ್‌ನಲ್ಲಿ ಚಾಮರಾಜನಗರ ರೈಲ್ವೆ ನಿಲ್ದಾಣದಲ್ಲಿ ಒಂದಷ್ಟು ಕಾಮಗಾರಿ ಆರಂಭಿಸಲಾಗಿತ್ತು.

ಬೊಕ್ಕಸಕ್ಕೆ ಹೊರೆ ಸಂಬಂಧ ಚಾಲನೆ ಸಿಕ್ಕಿರಲಿಲ್ಲ: ರಾಜ್ಯ ಸರ್ಕಾರ ಈ ಯೋಜನೆಗೆ ತನ್ನ ಪಾಲಿನ ಶೇ. 50ರಷ್ಟು ಅನುದಾನ ಹಾಗೂ ಭೂಸ್ವಾಧೀನ ಮಾಡಿಕೊಡಬೇಕಾಗಿತ್ತು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಎರಡು ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಮೂರನೇ ಸಂಪುಟ ಸಭೆಯಲ್ಲಿ ಯೋಜನೆಗೆ ಬೇಕಾದ ತನ್ನ ಪಾಲಿನ ಶೇ.50ರಷ್ಟು ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು.

ಸಂಪುಟದಲ್ಲಿ ಒಪ್ಪಿಗೆಯೇನೋ ದೊರೆಯಿತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಅಂದಿನ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಶೇ.50ರಷ್ಟು ವೆಚ್ಚ ಮತ್ತು ಭೂಸ್ವಾಧೀನ ಎರಡಕ್ಕೂ ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಹೊರೆ ಯಾಗುತ್ತದೆ ಎಂದು ಚಾಲನೆ ನೀಡಿರಲಿಲ್ಲ ಎನ್ನಲಾಗಿದೆ.

Advertisement

ಈ ಯೋಜನೆಯಿಂದ ಕನಕಪುರ, ಮಂಡ್ಯ ಜಿಲ್ಲೆಗಳಿಗೆ ಪ್ರಯೋಜನ ದೊರಕುತ್ತಿದ್ದರೂ ಅಂದಿನ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಹ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲಿಲ್ಲ ಎನ್ನಲಾಗಿದೆ. ಯೋಜನೆಗೆ ಬೇಕಾದ ಭೂಮಿ ಇಲ್ಲದೇ ಈ ರೈಲ್ವೆ ಮಾರ್ಗದ ಕಾಮಗಾರಿ ನಡೆಯುವಂತಿಲ್ಲ. ಹಾಗಾಗಿ ಈ ಯೋಜನೆಗೆ ಪ್ರಸ್ತುತ ನನೆಗುದಿಗೆ ಬಿದ್ದಿದೆ.

ಚಾ.ನಗರ-ಬೆಂಗಳೂರು ನೇರ ಮಾರ್ಗ: ರೈಲ್ವೆ ಮಾರ್ಗ ಒಂದು ವೇಳೆ ಕಾರ್ಯರೂಪಕ್ಕೆ ಬಂದರೆ, ಅದು ಚಾಮರಾಜನಗರ ಮತ್ತು ಬೆಂಗಳೂರು ನಡುವಿನ ಅತಿ ಹತ್ತಿರದ ಮಾರ್ಗವಾಗಲಿದೆ. ಪ್ರಸ್ತುತ ಚಾಮರಾಜನಗರದಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಲು  ಮೈಸೂರು ಮೂಲಕವೇ ಹೋಗಬೇಕು. ಇದರ ಒಟ್ಟು ದೂರ 190 ಕಿ.ಮೀ. ಆಗುತ್ತದೆ. ಚಾಮರಾಜನಗರ ಕೊಳ್ಳೇಗಾಲ, ಕನಕಪುರ ಹೆಜ್ಜಾಲ ರೈಲ್ವೆ ಯೋಜನೆ ಕಾರ್ಯಗತವಾದರೆ, ಚಾಮರಾಜನಗರದಿಂದ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ 165 ಕಿ.ಮೀ. ದೂರವಾಗುತ್ತದೆ. ಕೇವಲ ಅಂತರ ಕಡಿಮೆಯಾಗುವುದಷ್ಟೇ ಅಲ್ಲ, ಪ್ರಸ್ತುತ ಚಾಮರಾಜನಗರದಿಂದ ಬೆಂಗಳೂರಿಗೆ (ಮೈಸೂರು ಮಾರ್ಗ) ಕೇವಲ ಎರಡು ರೈಲುಗಳು ಮಾತ್ರ ಇವೆ. ಈ ರೈಲುಗಳು ಮೈಸೂರಿಗೆ ಬಂದಾಗ ಲೆವೆಲ್‌ ಕ್ರಾಸಿಂಗ್‌ ಮಾಡಿ, ಮಾರ್ಗ ಕಾದು ಬರಲು ಮೈಸೂರಿನಲ್ಲಿ ಕನಿಷ್ಠ 30 ರಿಂದ 45 ನಿಮಿಷ ಕಾಯಬೇಕು.

ಹೀಗಾಗಿ ಪ್ರಯಾಣಿಕರಿಗೆ ಸಮಯವೂ ಉಳಿತಾಯವಾಗಲಿದೆ. ನೇರ ಮಾರ್ಗವಾದಾಗ ಈ ಮಾರ್ಗದಲ್ಲಿ ಬೆಂಗಳೂರಿಗೆ ಹೆಚ್ಚಿನ ರೈಲುಗಳು ಓಡಾಟ ನಡೆಸುವುದರಿಂದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಿದೆ. ಮೈಸೂರು ಮಾರ್ಗದ ಒತ್ತಡವೂ ಕಡಿಮೆಯಾಗುತ್ತದೆ. ಮಂಡ್ಯ ಜಿಲ್ಲೆಯ ಮಳವಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ಪಟ್ಟಣಗಳಿಗೆ ಹೊಸದಾಗಿ ರೈಲ್ವೆ ಮಾರ್ಗ ದೊರಕಲಿದೆ. ಈ ಪಟ್ಟಣಗಳಿಗೆ ಈಗ ರೈಲ್ವೆ ಸೌಲಭ್ಯವಿಲ್ಲ. ಇದರಿಂದ ಮೂರು ಜಿಲ್ಲೆಯ ಜನರಿಗೆ ಬಹಳ ಅನುಕೂಲವಾಗಲಿದೆ.

 

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next