ಹೊಸದಿಲ್ಲಿ : “ನಿಮ್ಮ ಅಕ್ರಮ ಠೇವಣಿ, ಆಸ್ತಿಪಾಸ್ತಿಗಳ ಬಗ್ಗೆ ನಮಗೆ ಎಲ್ಲ ಮಾಹಿತಿ ಇದೆ. ಮಾರ್ಚ್ 31ರಂದು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮುಗಿಯಲಿದೆ. ಅದಕ್ಕೆ ಮೊದಲು ಈ ಯೋಜನೆಯ ಲಾಭ ಪಡೆದು ನೀವು ಶುದ್ಧ ಹಸ್ತರಾಗಬೇಕಾಗಿದೆ’ ಎಂದು ಆದಾಯ ತೆರಿಗೆ ಇಲಾಖೆ ಕಪ್ಪುಹಣ ಹೊಂದಿರುವವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಕಪ್ಪು ಹಣ ಘೋಷಿಸಕೊಳ್ಳುವುದಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಕಪ್ಪುಹಣ ಹೊಂದಿರುವವರು ಮಾರ್ಚ್ 31ರೊಳಗೆ ಪಿಎಂಜಿಕೆವೈ ಯೋಜನೆಯ ಲಾಭ ಪಡೆಯಲು ಈ ಕೂಡಲೇ ಮುಂದಾಗಬೇಕು; ಅನಂತರ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ ಎಂದು ಮನವರಿಕೆ ಮಾಡುವ ಜಾಹೀರುತುಗಳನ್ನು ಆದಾಯ ತೆರಿಗೆ ಇಲಾಖೆಯು ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟಿಸಿದೆ.
ಪಿಎಂಜಿಕೆವೈ ಯೋಜನೆಯಡಿ ತಮ್ಮ ಕಪ್ಪು ಹಣ ಮತ್ತು ಆಸ್ತಿಪಾಸ್ತಿಯನ್ನು ಘೋಷಿಸಿಕೊಳ್ಳುವವರ ಬಗ್ಗೆ ಸಂಪೂರ್ಣ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಮಾರ್ಚ್ 31ರ ಬಳಿಕ ಕಪ್ಪುಹಣ, ಆಸ್ತಿ ಪಾಸ್ತಿ ಹೊಂದಿರುವವರ ಸಂಪೂರ್ಣ ವಿವರಗಳನ್ನು ಬೇನಾಮಿ ವ್ಯವಹಾರಗಳ ಕಾಯಿದೆಯ ಪ್ರಕಾರ ಜಾರಿ ನಿರ್ದೇಶನಾಲಯ, ಸಿಬಿಐ ಸಹಿತ ವಿವಿಧ ಕೇಂದ್ರ ತನಿಖಾ ದಳಗಳಿಗೆ ಒದಗಿಸಲಾಗುವುದು ಮತ್ತು ಅತ್ಯಂತ ಕಠಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ (ಪಿಎಂಜಿಕೆವೈ) ಯೋಜನೆಯಡಿ ಕಾಳಧನಿಕರು ತಮ್ಮಲ್ಲಿನ ಕಪ್ಪು ಹಣದ ಮೇಲೆ ಶೇ.49.9 ತೆರಿಗೆ ಪಾವತಿಸಬೇಕಾಗುವುದು. ಇಲ್ಲದಿದ್ದಲ್ಲಿ ಅನಂತರದಲ್ಲಿ ಅವರು ತಮ್ಮ ಆದಾಯ ತೆರಿಗೆ ರಿಟರ್ನ್ ನಲ್ಲಿ ಶೇ.77.25ರ ದಂಡ ತೆರಿಗೆಯನ್ನು ಪಾವತಿಸಬೇಕಾಗುವುದು. ಒಂದು ವೇಳೆ ಅದನ್ನೂ ಮಾಡದೇ ಸಿಕ್ಕಿಬಿದ್ದಲ್ಲಿ ಅವರ ಮೇಲೆ ಶೇ.83.25ರ ತೆರಿಗೆಯನ್ನು ವಿಧಿಸಲಾಗುವುದು.
ಇವ್ಯಾವುದನ್ನೂ ಮಾಡದೇ ದಾಳಿಗೆ ಗುರಿಯಾಗುವವರು ಶೇ.107.25ರ ತೆರಿಗೆ ಮತ್ತು ದಂಡವನ್ನು ಎದುರಿಸಬೇಕಾಗುವುದು. ದಾಳಿಯ ವೇಳೆಯೂ ತಮ್ಮ ಅಕ್ರಮ ಕಪ್ಪು ಹಣ, ಆಸ್ತಿ ಪಾಸ್ತಿಯನ್ನು ಮುಚ್ಚಿಟ್ಟವರು ಶೇ.137.25ರ ತೆರಿಗೆ, ದಂಡವನ್ನು ಎದುರಿಸಬೇಕಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.