Advertisement

Job: ಸರ್ಕಾರಿ ಆಸ್ಪತ್ರೆಗಳಲ್ಲಿ 13,622 ಹುದ್ದೆ ಖಾಲಿ !

09:49 PM Jun 04, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ತಜ್ಞ ವೈದ್ಯರು, ನರ್ಸ್‌ ಸೇರಿ ಬರೊಬ್ಬರಿ 13,622 ಹುದ್ದೆಗಳು ಖಾಲಿಯಿದ್ದು, ಲಕ್ಷಾಂತರ ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

Advertisement

ಹೌದು, ಬಡವರಿಗೆ ಆರೋಗ್ಯ ಸೇವೆಗಳು ಕೈಗೆಟಕುವಂತಾಗಬೇಕು ಎಂಬುದು ಸರ್ಕಾರದ ಘೋಷಣೆಯಾದರೂ ರಾಜ್ಯದಲ್ಲಿರುವ ಒಟ್ಟು 911 ಸರ್ಕಾರಿ ಆಸ್ಪತ್ರೆಗಳಲ್ಲೂ ವೈದ್ಯರು ಸೇರಿ ಸಿಬ್ಬಂದಿ ಕೊರತೆಯೇ ರೋಗಿಗಳ ಸಾವಿನ ಪ್ರಮಾಣ ಹೆಚ್ಚಲು ಪ್ರಮುಖ ಕಾರಣ ಎಂಬಂತಾಗಿದೆ. ರಾಜ್ಯದ ಗ್ರಾಮೀಣ ಭಾಗಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಮುಂದೆ ಸರದಿ ಸಾಲಿನಲ್ಲಿ ಚಿಕಿತ್ಸೆಗಾಗಿ ತಾಸುಗಟ್ಟಲೆ ನಿಂತು ಹೈರಾಣಾಗುತ್ತಿದ್ದಾರೆ. ವಿಶೇಷ ತಜ್ಞ ವೈದ್ಯರು ಬೇಕೆಂದರೆ ಬಡ ಜನ ಸಾವಿರಾರು ರೂ.ತೆತ್ತು ಖಾಸಗಿ ಆಸ್ಪತ್ರೆ ಮೊರೆ ಹೋಗುವ ಅಸಹಾಯಕತೆ ಎದುರಾಗಿದೆ. ಮಂಜೂರಾಗಿರುವ 38,500 ಹುದ್ದೆಗಳ ಪೈಕಿ 24,878 ಹುದ್ದೆ ಭರ್ತಿಯಾಗಿವೆ. 13,622 ಹುದ್ದೆ (ಶೇ.36) ಇನ್ನೂ ಖಾಲಿ ಉಳಿದಿವೆ ಎಂದು ಆರೋಗ್ಯ ಇಲಾಖೆ ಮೂಲಗಳು “ಉದಯವಾಣಿ”ಗೆ ದೃಢಪಡಿಸಿವೆ.

ವೈದ್ಯರು, ನರ್ಸ್‌ಗಳ ಕೊರತೆ:
ಕರ್ನಾಟಕದಲ್ಲಿರುವ ಶೇ.78ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ, ಸ್ವತ್ಛತೆಯ ಕೊರತೆ ಎದುರಾಗಿದೆ. ಜತೆಗೆ ರೋಗಿಗಳ ಆರೈಕೆ ಮಾಡಬೇಕಿರುವ ನರ್ಸ್‌ಗಳು ಹಾಗೂ ವೈದ್ಯರಿಲ್ಲದೇ ಜನ ಪರದಾಡುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರ ಕೊರತೆಯಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ನೂರಾರು ರೋಗಿಗಳು ವೈದ್ಯರಿಗಾಗಿ ಕಾದು ಕುಳಿತುಕೊಳ್ಳುವ ದೃಶ್ಯ ಕಂಡು ಬರುತ್ತಿವೆ. ಬಡ ರೋಗಿಗಳ ಆರೋಗ್ಯ ಸ್ಥಿತಿ ಕೊಂಚ ಗಂಭೀರವಾದರೆ ತಜ್ಞ ವೈದ್ಯರ ಕೊರತೆಯಿಂದ ಬೆಡ್‌ನ‌ಲ್ಲೇ ಎರಡು-ಮೂರು ದಿನ ಕಳೆಯುವಂತಾಗಿದೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶು ರೋಗ ತಜ್ಞರು, ಮೂಳೆ ತಜ್ಞರು, ನೇತ್ರ ತಜ್ಞರು, ಕಿವಿ-ಗಂಟಲು-ಮೂಗು (ಇಎನ್‌ಟಿ) ತಜ್ಞರು, ಚರ್ಮ ವೈದ್ಯರು, ಅರಿವಳಿಕೆ, ರೆಡಿಯೋಲಜಿ, ನರ ರೋಗ ತಜ್ಞರು ವಾರಕ್ಕೊಮ್ಮೆ ಬಂದು ಹೋಗುತ್ತಾರೆ. ವೈದ್ಯರು, ನರ್ಸ್‌ಗಳು ಅವಧಿಗಿಂತ 4 ಗಂಟೆ ಹೆಚ್ಚುವರಿ ಕೆಲಸ ಮಾಡುತ್ತಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ.

ಬಹುತೇಕ ಜಿಲ್ಲೆಗಳಲ್ಲಿ ಸಮಸ್ಯೆ:

ರಾಜ್ಯದ ಜನ ಸಂಖ್ಯೆಗೆ ಹೋಲಿಸಿದರೆ 60 ಸಾವಿರಕ್ಕೂ ಅಧಿಕ ವೈದ್ಯರ ನೇಮಿಸಬೇಕಿದೆ. ಪ್ರಸ್ತುತ 12 ಸಾವಿರ ಜನರಿಗೆ ಸರಾಸರಿ ಒಬ್ಬರು ವೈದ್ಯರಿದ್ದಾರೆ. ಸೂಪರ್‌ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳತ್ತ ವೈದ್ಯರು ಮುಖ ಮಾಡುತ್ತಿಲ್ಲ. ಸ್ಕ್ಯಾನಿಂಗ್‌, ಎಕ್ಸರೇಗಾಗಿ ವಾರಗಟ್ಟಲೆ ಕಾಯಬೇಕಾಗಿದೆ. ಬೆಂಗಳೂರು, ಬೆಳಗಾವಿ, ಮಂಗಳೂರು, ಬೀದರ್‌, ವಿಜಯಪುರ, ಧಾರವಾಡ, ಮಂಡ್ಯ, ಮೈಸೂರು, ಕೊಪ್ಪಳ, ರಾಯಚೂರು, ಕಲಬುರಗಿ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ದಾವಣಗೆರೆ, ಕೊಡಗು ಜಿಲ್ಲೆಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ.

Advertisement

147 ತಾಲೂಕು ಆಸ್ಪತ್ರೆ, 19 ಜಿಲ್ಲಾ ಆಸ್ಪತ್ರೆಗಳು, 12 ಮೆಡಿಕಲ್‌ ಕಾಲೇಜಿನ ಅಡಿಯಲ್ಲಿ ಬರುವ ಜಿಲ್ಲಾ ಆಸ್ಪತ್ರೆಗಳು, 147 ತಾಲೂಕು ಆಸ್ಪತ್ರೆ, 216 ಕಮ್ಯೂನಿಟಿ ಹೆಲ್ತ್‌ ಸೆಂಟರ್‌, 47 ಎಂಸಿಎಚ್‌ ಆಸ್ಪತ್ರೆ, 365 ಪ್ರಾಥಮಿಕ ಆರೋಗ್ಯ ಕೇಂದ್ರ, 105 ಯುಪಿಎಚ್‌ಸಿ ಕೇಂದ್ರಗಳು ರಾಜ್ಯದಲ್ಲಿವೆ.

ಹುದ್ದೆಯ ಹೆಸರು- ಖಾಲಿ ಇರುವ ಹುದ್ದೆ
ಜನರಲ್‌ ಡ್ನೂಟಿಸ್‌ ಮೆಡಿಕಲ್‌ ಆಫೀಸರ್‌-914
ಡೆಂಟಲ್‌ ಹೆಲ್ತ್‌ ಆಫೀಸರ್‌- 20
ತಜ್ಞ ವೈದ್ಯರು-572
ನರ್ಸ್‌- 2,272
ಫಾರ್ಮಸಿ ಆಫೀಸರ್‌-1,239
ಲ್ಯಾಬ್‌ ಟೆಕ್ನಿಕಲ್‌ ಆಫೀಸರ್‌-1,723
ರೇಡಿಯೋಲಜಿ ಇಮ್ಯಾಜಿಂಗ್‌ ಆಫೀಸರ್‌-152
ಓಪ್ತಲಮಿಕ್‌ ಆಫೀಸರ್‌-245
ಪ್ರೈಮರಿ ಹೆಲ್ತ್‌ ಕೇರ್‌ ಆಫೀಸರ್‌-3,636
ಹೆಲ್ತ್‌ ಇನ್‌ಸ್ಪೆಕ್ಟಿಂಗ್‌ ಆಫೀಸರ್‌-2,849

ಖಾಲಿ ಇರುವ ವೈದ್ಯ ಹಾಗೂ ಪ್ಯಾರಾ ಮೆಡಿಕಲ್‌ ಹುದ್ದೆ ಭರ್ತಿ ಮಾಡಲು ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಈ ಹಿಂದೆಯೂ ವೈದ್ಯರ ಹುದ್ದೆ ಭರ್ತಿ ಮಾಡುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು.
| ಡಿ.ರಂದೀಪ್‌, ಆಯುಕ್ತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next