Advertisement
ರಾಜ್ಯದ ಒಟ್ಟಾರೆ 236 ತಾಲೂಕುಗಳ ಪೈಕಿ 136 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಕನಿಷ್ಠ 0.5ರಿಂದ ಗರಿಷ್ಠ 24 ಮೀಟರ್ ವರೆಗೆ ಇಳಿಮುಖವಾಗಿರುವುದು ಕಂಡು ಬಂದಿದೆ. ಇದರಲ್ಲಿ ಚಿಕ್ಕಮಗಳೂರು, ಕೊಡಗು,ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಬಹು ತೇಕ ತಾಲೂಕುಗಳೂ ಸೇರಿರುವುದು ಆತಂಕ ಕಾರಿ ಅಂಶವಾಗಿದೆ. ದೀರ್ಘಾವಧಿ ಮಳೆ ಕೈಕೊಟ್ಟಿರುವುದು ಹಾಗೂ ಅತಿಯಾಗಿ ಅಂತರ್ಜಲ ಬಳಕೆ ಈ ನಕಾರಾತ್ಮಕ ಬೆಳವಣಿಗೆಗೆ ಪ್ರಮುಖ ಕಾರಣ.
Related Articles
Advertisement
ಮಲೆನಾಡಲ್ಲಿ ಕುಸಿತ; ಬರದ ನಾಡಲ್ಲಿ ಏರಿಕೆ!:
ಮಲೆನಾಡು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಬರದ ನಾಡು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗಣನೀಯವಾಗಿ ಏರಿಕೆಯಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ! ಇದು ಕೆರೆ ತುಂಬಿಸುವ ಯೋಜನೆ ಎಫೆಕ್ಟ್. ಕೆ.ಸಿ. ವ್ಯಾಲಿ ಯೋಜನೆ ಅಡಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೆತ್ತಿಕೊಂಡ ಪರಿಣಾಮ ಅಲ್ಲಿನ ಕೆರೆಗಳು ಭರ್ತಿ ಆಗುವುದರ ಜತೆಗೆ ಅಂತರ್ಜಲವೂ ವೃದ್ಧಿಗೊಂಡಿದೆ. ಆಯಾ ಜಿಲ್ಲೆಗಳ ಬಹುತೇಕ ಎಲ್ಲ ತಾಲೂಕುಗಳಲ್ಲೂ ಅಂತರ್ಜಲ ಏರಿಕೆಯಾಗಿದೆ. ಆದರೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಗರಿಷ್ಠ ಪ್ರಮಾಣದ ಅಂದರೆ 24 ಮೀಟರ್‌ನಷ್ಟು ಪಾತಾಳಕ್ಕಿಳಿದಿದೆ.
ಬೆಂಗಳೂರು ಪೂರ್ವ: 11 ಮೀಟರ್ ಕುಸಿತ:
ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳ ಪೈಕಿ ನಾಲ್ಕರಲ್ಲಿ ಅಂತರ್ಜಲ ಮಟ್ಟ ಇಳಿಕೆ ಕಂಡಿದ್ದು, ಅದರಲ್ಲೂ ಬೆಂಗಳೂರು ಪೂರ್ವದಲ್ಲಿ 10.80 ಮೀಟರ್ ಕುಸಿದಿದೆ! ಈಗಾಗಲೇ ಸ್ವತಃ ಸಿಎಂ ಸಿದ್ದರಾಮಯ್ಯ ಈಚೆಗೆ ನಡೆಸಿದ ನೀರಿನ ಸಮಸ್ಯೆ ಕುರಿತ ಪರಿಶೀಲನಾ ಸಭೆಯಲ್ಲಿ 14 ಸಾವಿರ ಸರಕಾರಿ ಕೊಳವೆಬಾವಿಗಳ ಪೈಕಿ 7 ಸಾವಿರ ಬತ್ತಿವೆ. ಖಾಸಗಿ ಕೊಳವೆಬಾವಿಗಳು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅಂತರ್ಜಲದ ಅತಿಯಾದ ಬಳಕೆಯಿಂದ ದಿನದಿಂದ ದಿನಕ್ಕೆ ನಗರದ ಅಂತರ್ಜಲ ಮಟ್ಟ ಕೂಡ ಇಳಿಮುಖವಾಗುತ್ತಿದೆ ಎಂದು ಕಂಡುಬಂದಿದೆ.
ಅಂತರ್ಜಲ ಮಟ್ಟ ಸುಧಾರಣೆಗೆ ಮರುಪೂರಣ ಪ್ರಕ್ರಿಯೆ ಪರಿಣಾಮಕಾರಿಯಾಗಿ ಆಗಬೇಕು. ಇದು ಸಮರ್ಪಕವಾಗಿ ಆಗದಿದ್ದರೆ, ಗಣನೀಯವಾಗಿ ಕುಸಿಯುತ್ತಲೇ ಹೋಗುತ್ತದೆ. ಕೃಷಿಗೆ ಸಾಧ್ಯವಾದಷ್ಟು ಹನಿ ಮತ್ತು ತುಂತುರು ನೀರಾವರಿ ಮೂಲಕ ಮಿತಬಳಕೆ ಆಗಬೇಕು. ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕು. – ಬಿ.ಜಿ. ರಾಮಚಂದ್ರಯ್ಯ,ನಿರ್ದೇಶಕರು, ಅಂತರ್ಜಲ ನಿರ್ದೇಶನಾಲಯ
–ವಿಜಯ ಕುಮಾರ ಚಂದರಗಿ