Advertisement

ಕರಾವಳಿ ಜಿಲ್ಲೆಗಳಲ್ಲಿ 1348 ಹೊಸ ಕಿಂಡಿ ಅಣೆಕಟ್ಟುಗಳ ನಿರ್ಮಾಣ: ಸಚಿವ ಮಾಧುಸ್ವಾಮಿ

04:06 PM Nov 24, 2020 | keerthan |

ಕಾಪು: ಕರಾವಳಿ ಪ್ರದೇಶದ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು ಈ ಯೋಜನೆಯಡಿ 1348 ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ ಮಾಧುಸ್ವಾಮಿ ಹೇಳಿದರು.

Advertisement

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ 3,976 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ‌ ಸಲ್ಲಿಸಲಾಗಿದೆ. ಮುಂದಿನ‌ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕುವ ನಿರೀಕ್ಷೆಯಿದೆ ಎಂದರು.

ಸಮುದ್ರ ಸೇರುವ ನೇತ್ರಾವತಿ ನದಿ ಮತ್ತು ಕರಾವಳಿ ಜಿಲ್ಲೆಗಳ ವಿವಿಧ ನದಿ-ತೊರೆಗಳ ನೀರನ್ನು ನಮ್ಮಲ್ಲೇ ಉಳಿಸಿಕೊಂಡು, ಅದನ್ನು ರೈತರಿಗೆ ಒದಗಿಸಿಕೊಡುವ ನಿಟ್ಟಿನಲ್ಲಿ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ನಿರ್ಹಣೆಯಿಲ್ಲದೇ ಸೊರಗುತ್ತಿರುವ ಕಿಂಡಿಅಣೆಕಟ್ಟುಗಳ ಬಗ್ಗೆ ಸಚಿವರ ಗಮನಕ್ಕೆ ತಂದಾಗ ಈ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳಲಾಗುವುದು.‌ ನಿರ್ವಹಣೆ ಕೊರತೆಯಿಂದ ತೊಂದರೆಗೊಳಗಾದ ಕಿಂಡಿಅಣೆಕಟ್ಟುಗಳ ದುರಸ್ತಿಗಾಗಿ ಕೂಡಲೇ 4 ಕೋಟಿ ರೂಪಾಯಿ ಅನುದಾನವನ್ನು ಹೊಂದಿಸಿಕೊಡಲಾಗುವುದು ಎಂದರು.

ಇದನ್ನೂ ಓದಿ:28 ಗುಂಟೆ ಜಮೀನಿನಲ್ಲಿ ಬಹುಬೆಳೆ ಬೆಳೆದು ಆದಾಯ ಕಂಡುಕೊಂಡ ಯುವ ರೈತ ರೇವಣ್ಣ

Advertisement

ಸಿ.ಆರ್.ಝ.ಡ್ ಕಾಯ್ದೆ ತಿದ್ದುಪಡಿಯ ಬಗ್ಗೆ ಸರಕಾರ ತನ್ನ ಪ್ರಯತ್ನ ಮುಂದುವರಿಸಿದೆ. ಖಾಯಿದೆಯನ್ನು ಕೇಂದ್ರ ಸರಕಾರ ತಿದ್ದುಪಡಿ ಮಾಡಿದ್ದು, ಅದರ ಮ್ಯಾಪಿಂಗ್ ಬಾಕಿಯಾಗಿದೆ. ಮ್ಯಾಪಿಂಗ್ ಪೂರ್ಣಗೊಂಡ ಕೂಡಲೇ ಬದಲಾದ ಸಿ.ಆರ್.ಝಡ್ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದರು.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ವಿಚಾರದಲ್ಲಿ ಸರಕಾರ ಈಗಾಗಲೇ ಕೋರ್ಟ್ ಗೆ ದಾಖಲಾತಿಗಳನ್ನು ಸಲ್ಲಿಸಿದ್ದು, ಒಂದೆರಡು ದಿನದಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ. ಶೀಘ್ರ ಗೊಂದಲ ಬಗೆಹರಿಯುವ ವಿಶ್ವಾಸವಿದೆ ಎಂದರು.

ಸಂಪುಟ ಪುನಾರ್ರಚನೆ, ಸೇರ್ಪಡೆ ಇತ್ಯಾದಿಗಳ‌ ಬಗ್ಗೆ ನೋ ಕಮೆಂಟ್ಸ್ ಎಂದ ಸಚಿವರು, ಕಾಂಟ್ರವರ್ಸಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next