ಬೀದರ್: ಕೋವಿಡ್ 19 ಮಹಾಮಾರಿ ಜಿಲ್ಲೆಯಲ್ಲಿ ಇಂದೂ ತನ್ನ ಪ್ರಕೋಪವನ್ನು ಮುಂದುವರಿಸಿದೆ.
ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 134 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ ಮಾತ್ರವಲ್ಲದೆ ಇಂದು ಒಂದೇ ದಿನದಲ್ಲಿ ಮೂವರು ಈ ಸೋಂಕಿಗೆ ಬಲಿಯಾಗಿದ್ದಾರೆ.
ಔರಾದ ತಾಲೂಕಿನ ಇಬ್ಬರು ಮತ್ತು ಬೀದರ್ ತಾಲೂಕಿನ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಜ್ವರ, ಕೆಮ್ಮು, ಉಸಿರಾಟ ಮತ್ತು ಜ್ವರ ಲಕ್ಷಣಗಳನ್ನು ಹೊಂದಿದ್ದ ಔರಾದ ತಾಲೂಕಿನ 64 ಮತ್ತು 70 ವರ್ಷದ ವ್ಯಕ್ತಿಗಳು ಹಾಗೂ ಬೀದರ ತಾಲೂಕಿನ 65 ವರ್ಷದ ವ್ಯಕ್ತಿ ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಇವರಿಬ್ಬರೂ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಅಧಿಕ ರಕ್ತದೊತ್ತಡ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಇವರು ಬಳಲುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.
ಬುಧವಾರ ಬರೋಬ್ಬರಿ 134 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಹುಮನಾಬಾದ್ – ಚಿಟಗುಪ್ಪ ತಾಲೂಕಿನ 36 ಜನರು, ಭಾಲ್ಕಿ ತಾಲೂಕಿನ 23 ಮಂದಿ, ಬೀದರ್ ತಾಲೂಕಿನ 31 ಜನ, ಔರಾದ- ಕಮಲನಗರ ತಾಲೂಕಿನ 28 ಮಂದಿ ಹಾಗೂ ಬಸವಕಲ್ಯಾಣ – ಹುಲಸೂರು ತಾಲೂಕಿನ 7 ಜನ ಮತ್ತು ಅನ್ಯ ರಾಜ್ಯ – ಜಿಲ್ಲೆಗಳ 19 ಜನರು ಇದರಲ್ಲಿ ಸೇರಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 3151ಕ್ಕೆ ತಲುಪಿದೆ. ಇಂದು ಒಂದೇ ದಿನ 115 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ 19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2182ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಸಂಬಂಧಿಸಿದ 862 ಸಕ್ರಿಯ ಪ್ರಕರಣಗಳು ಇವೆ.
ಈವರೆಗೆ ಜಿಲ್ಲೆಯಾದ್ಯಂತ 55,157 ಜನರ ಗಂಟಲ ಮಾದರಿಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 51,288 ಮಂದಿಯದ್ದು ನೆಗೆಟಿವ್ ವರದಿ ಬಂದಿದೆ. ಇನ್ನೂ 718 ಜನರ ವರದಿ ಬರಬೇಕಿದೆ.