ಧಾರವಾಡ: ಲಾಕ್‌ಡೌನ್‌ನಿಂದ ಜಿಲ್ಲೆಯ ವಿವಿಧ 9 ಹಾಸ್ಟೆಲ್‌ಗಳಲ್ಲಿ ಇದ್ದ ವಲಸೆ ಕಾರ್ಮಿಕರಲ್ಲಿ ಕೆಲವರು ತಮ್ಮ ಮೂಲ ನೆಲೆಗೆ ತೆರಳಿದ್ದಾರೆ.
ಮಾ. 24 ರ ಲಾಕ್‌ಡೌನ್ ಘೋಷಣೆಯಾದ ನಂತರ ಅವರ ಸ್ವಂತ ಸ್ಥಳಗಳಿಗೆ ತಲುಪಲು ಸಾಧ್ಯವಾಗದ 415 ವಲಸೆ ಕಾರ್ಮಿಕರಿಗೆ ಜಿಲ್ಲೆಯ ವಿವಿಧ ಹಾಸ್ಟೆಲ್‌ಗಳಲ್ಲಿ ಆಶ್ರಯ ಕಲ್ಪಿಸಿ, ಊಟ, ಉಪಹಾರ, ಬಟ್ಟೆ ಒದಗಿಸಲಾಗಿತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದ ಅನ್ವಯ ರಾಜ್ಯದೊಳಗಿನ ವಿವಿಧ ಜಿಲ್ಲೆಗಳ ಕೃಷಿ ಮತ್ತು ಕಟ್ಟಡ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಡಿಸಿ ದೀಪಾ ಚೋಳನ್ ಅವರ ವಿಶೇಷ ಕಾಳಜಿಯಿಂದ ಶುಕ್ರವಾರ ಜಿಲ್ಲೆಯಿಂದ 133 ಜನ ಕೃಷಿ ಮತ್ತು ಕಟ್ಟಡ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಿ ಕೊಡಲಾಗಿದೆ.
ಜಿಲ್ಲೆಯ ವಿವಿಧ 09 ಹಾಸ್ಟೆಲ್‌ಗಳಲ್ಲಿ 415 ಕಾರ್ಮಿಕರು ಆಶ್ರಯ ಪಡೆದಿದ್ದರು. ಅವರಲ್ಲಿ 169 ಜನ ರಾಜ್ಯದೊಳಗಿನ ಕೃಷಿ ಮತ್ತು ಕಟ್ಟಡ ಕಾರ್ಮಿಕರಾಗಿದ್ದರು. ಈ ಪೈಕಿ 36 ಜನ ಧಾರವಾಡ ಜಿಲ್ಲೆಯವರೇ ಆಗಿದ್ದಾರೆ, 133 ಜನ ರಾಜ್ಯದ ವಿವಿಧ 18 ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರನ್ನೂ ಶುಕ್ರವಾರ ಸಾರಿಗೆ ಸಂಸ್ಥೆಯ 10 ಬಸ್ ಗಳು ಹಾಗೂ 05 ಮಿನಿ ವಾಹನಗಳ ಮೂಲಕ ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲಾಯಿತು. ಪ್ರತಿ ವಾಹನಕ್ಕೂ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ವಾಹನದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ, ಬಿಸಿಯೂಟ ಯೋಜನೆಯ ಬಿ.ಎಸ್.ಮಾಯಾಚಾರ್ಯ, ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ವರ್ಗ ವಲಸೆ ಕಾರ್ಮಿಕರ ಆಶ್ರಯ, ವಸತಿ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಕೃಷಿ,ಕಟ್ಟಡ ಕಾರ್ಮಿಕರಲ್ಲದವರು ಹಾಗೂ ಬೇರೆ ರಾಜ್ಯಗಳ ಕಾರ್ಮಿಕರಿಗೆ ವಸತಿ ಸೌಕರ್ಯ ಮುಂದುವರೆಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್ .ಪುರುಷೋತ್ತಮ ತಿಳಿಸಿದ್ದಾರೆ.