Advertisement

ದ.ಕ.: 131 ಪಾಸಿಟಿವ್‌; ನಾಲ್ವರ ಸಾವು ;  ಜಿಲ್ಲೆಯಲ್ಲಿ 50ಕ್ಕೇರಿದ ಮೃತರ ಸಂಖ್ಯೆ

12:47 AM Jul 14, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 131 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಇದೇ ವೇಳೆ ಜಿಲ್ಲೆಯಲ್ಲಿ ನಾಲ್ವರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ.

ಬಾಧಿತರ ಪೈಕಿ 16 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ 19 ತಗಲಿದೆ.

ವಿದೇಶದಿಂದ ಆಗಮಿಸಿದ್ದ ನಾಲ್ವರಿಗೆ, ಇನ್‌ಫ್ಲೂಯೆನ್ಷಾ ಲೈಕ್‌ ಇಲ್‌ನೆಸ್‌ನಿಂದ ಬಳಲುತ್ತಿದ್ದ 63 ಮಂದಿಗೆ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 10 ಮಂದಿಗೆ ಕೋವಿಡ್ 19 ಪಾಸಿಟಿವ್‌ ಬಂದಿದೆ.

38 ಮಂದಿಯ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. 62 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Advertisement

50ಕ್ಕೆ ಏರಿದ ಸಾವಿನ ಸಂಖ್ಯೆ
ಜಿಲ್ಲೆಯಲ್ಲಿ ಮೃತಪಟ್ಟ ನಾಲ್ವರಿಗೆ ಸೋಮವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 50ಕ್ಕೆ ಏರಿರುವುದು ಗಂಭೀರ ವಿಚಾರ.

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ಶನಿವಾರ ಹಾಗೂ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ರವಿವಾರ ಮೃತಪಟ್ಟಿದ್ದಾರೆ. ಅಲ್ಲದೆ ಹೆಪಟೈಟಿಸ್‌ ಕಾಯಿಲೆಯಿಂದ ಬಳಲುತ್ತಿದ್ದ 53 ವರ್ಷದ  ಮತ್ತು ತೀವ್ರ ಉಸಿರಾಟದ ಸಮಸ್ಯೆಯ 60 ವರ್ಷದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಪರೀಕ್ಷಾ ವರದಿ ಸೋಮವಾರ ಲಭ್ಯವಾಗಿದೆ.

ಮೂಲ್ಕಿ: 6 ಪ್ರಕರಣ
ಎಂಆರ್‌ಪಿಎಲ್‌ನಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕಾರ್ನಾಡು ಬಳಿಯ 51 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಸಸಿಹಿತ್ಲುವಿನ ನರ್ಸ್‌, ಗೋಳಿಜೋರದಲ್ಲಿ ಕೆಲವು ದಿನಗಳ ಹಿಂದೆ ಸೋಂಕು ತಗಲಿದ್ದ 3 ವರ್ಷದ ಮಗುವಿನ ತಾಯಿ, ತಂದೆ, ಅಜ್ಜ ಹಾಗೂ ಮನೆಗೆಲಸದ ಯುವತಿಯನ್ನೂ ಕೋವಿಡ್ 19 ಸೋಂಕು ಬಾಧಿಸಿರುವುದಾಗಿ ತಹಶೀಲ್ದಾರ್‌ ಮಾಣಿಕ್ಯ ತಿಳಿಸಿದ್ದಾರೆ.

ಸುರತ್ಕಲ್‌: 14 ಪ್ರಕರಣ
ಸುರತ್ಕಲ್‌ ವ್ಯಾಪ್ತಿಯಲ್ಲಿ ಸೋಮವಾರ 14 ಕೋವಿಡ್ 19 ಪಾಸಿಟಿವ್‌ ಪತ್ತೆಯಾಗಿದೆ. ಪೊಲೀಸ್‌ ಸಿಬಂದಿ ಮೊದಲೇ ಕ್ವಾರಂಟೈ ನ್‌ಗೆ ಒಳಗಾಗಿದ್ದು ಇದೀಗ ಪಾಸಿಟಿವ್‌ ವರದಿ ಬಂದಿದೆ.

ಪಂಜ: ಮನೆ ಸೀಲ್‌ಡೌನ್‌
ಪಂಜ ಗೋಳಿಯಡಿ ನಿವಾಸಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಮನೆ ಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಡಯಾಲಿಸಿಸ್‌ಗಾಗಿ ಸುಳ್ಯದ ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದರು. ಮೊನ್ನೆ ಡಯಾಲಿಸಿಸ್‌ ಕೇಂದ್ರದ ಸಿಬಂದಿಗೆ ಕೋವಿಡ್ 19 ದೃಢವಾಗಿ ಸುಳ್ಯ ಆಸ್ಪತ್ರೆ ಸೀಲ್‌ ಡೌನ್‌ ಆದ ಕಾರಣ ರೋಗಿಯು ಮಂಗಳೂರಿನ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಹೋಗಿದ್ದು ಅಲ್ಲಿ ಅವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿತ್ತು. ಅವರನ್ನು ಕೂಡ ಕೋವಿಡ್ 19 ಬಾಧಿಸಿರುವುದು ದೃಢಪಟ್ಟಿದೆ.

ನರ್ಸಿಂಗ್‌ ಹಾಸ್ಟೆಲ್‌ ಸಿಬಂದಿ ಕ್ವಾರಂಟೈನ್‌
ವೆನ್ಲಾಕ್‌ ನರ್ಸಿಂಗ್‌ ಹಾಸ್ಟೆಲ್‌ನಲ್ಲಿಯೂ ಕೆಲವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಕ್ವಾರಂಟೈನ್‌ನಲ್ಲಿದ್ದಾರೆ. ಯಾವುದೇ ರೋಗ ಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ ಇಬ್ಬರು ಹಾಸ್ಟೆಲ್‌ನಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಉಳಿದವರು ಎರಡನೇ ಹಂತದ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಸದ್ಯ ಹೋಂ ಕ್ವಾರಂಟೈನ್‌ ಆಗಿದ್ದಾರೆ ಎಂದು ಸಿಬಂದಿಯೋರ್ವರು ತಿಳಿಸಿದ್ದಾರೆ.

ದ.ಕ.: ಎಲ್ಲರಿಗೂ ಉಚಿತ ಚಿಕಿತ್ಸೆ
ಕೋವಿಡ್ 19 ಸೋಂಕಿತರಿಗೆ ಯಾವುದೇ ವರ್ಗ ಭೇದವಿಲ್ಲದೆ ದ.ಕ. ಜಿಲ್ಲೆಯ ಎಲ್ಲ ಮೆಡಿಕಲ್‌ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸೋಮವಾರ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ಕುರಿತಂತೆ ಪರಿಶೀಲಿಸಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು. ರೋಗಿಗಳು ಆಸ್ಪತ್ರೆಯಲ್ಲಿ ತಮ್ಮ ಆಧಾರ್‌ ಕಾರ್ಡ್‌ ತೋರಿಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಉಚಿತ ಚಿಕಿತ್ಸೆ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಅಧಿಕವಾಗಿದ್ದು, ಪ್ರತೀದಿನ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸಚಿವ ಕೋಟ ಸ್ಪಷ್ಟಪಡಿಸಿದರು.

ಅಧಿಕ ಬಿಲ್‌ಗೆ ಕೇಸು: ನಳಿನ್‌ ಸೂಚನೆ
ಕೆಲವು ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿದ ಚಿಕಿತ್ಸಾ ದರವನ್ನು ಮೀರಿ ಭಾರೀ ಮೊತ್ತದ ಬಿಲ್ಲನ್ನು ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದ್ದು, ಅಂತಹ ಆಸ್ಪತ್ರೆಗಳ ವಿರುದ್ಧ ಕೇಸು ದಾಖಲಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸರಕಾರಿ ದರದಲ್ಲಿ ದೊರಕುವ ಕೋವಿಡ್‌ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅಲ್ಲದೇ ರೋಗಿಗಳ ಅಹವಾಲಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರತ್ನಾಕರ್‌, ವೆನಾÉಕ್‌ ಅಧೀಕ್ಷಕ ಡಾ| ಸದಾಶಿವ, ಕೆಎಂಸಿ ಆಸ್ಪತ್ರೆ ಅಧಿಕಾರಿಗಳು ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯಲ್ಲಿ 3,500 ಹಾಸಿಗೆ ಸಿದ್ಧ
ಕೋವಿಡ್ 19 ಸೋಂಕಿತರಿಗೆ ಹಾಗೂ ರೋಗಲಕ್ಷಣ ಹೊಂದಿದವರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಆಸ್ಪತ್ರೆ ಹಾಗೂ ಕೇರ್‌ ಸೆಂಟರ್‌ಗಳಲ್ಲಿ 3,500 ಬೆಡ್‌ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿಗಳೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಈ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಮಾರು 10,000 ಹಾಸಿಗೆಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಇದೆ. ವಾರದೊಳಗೆ ಇದು ಸಿದ್ಧಗೊಳ್ಳಲಿದೆ. ಇದಕ್ಕಾಗಿ ಜಿಲ್ಲೆಯ ವಿವಿಧ ಹಾಸ್ಟೆಲ್‌, ಸಭಾಂಗಣ, ಆಸ್ಪತ್ರೆಗಳಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಇದುವರೆಗೆ ಜಿಲ್ಲೆಯಲ್ಲಿ 36,898 ಮಂದಿಯನ್ನು ಪರೀಕ್ಷಿಸಲಾಗಿದ್ದು, ಆ ಪೈಕಿ 2,222 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.ಪ್ರಸಕ್ತ ಜಿಲ್ಲೆಯಲ್ಲಿ 1,399 ಸಕ್ರಿಯ ಪ್ರಕರಣಗಳಿವೆ. 43 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದರು.

ಪ್ರಸಕ್ತ ಕೆಲವೊಂದು ಪ್ರದೇಶಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಕೆಲವೊಂದು ರೋಗಿಗಳ ಪ್ರಕರಣಗಳಲ್ಲಿ, ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಅಂತಹ ಪ್ರಕರಣಗಳು ಕ್ಲಿಷ್ಟವಾಗುತ್ತಿವೆ ಎಂದರು.

ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next