Advertisement

ನರಗುಂದ ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್‌ ಬಿತ್ತನೆ

04:27 PM Aug 31, 2018 | Team Udayavani |

ನರಗುಂದ: ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೀಜ ಬಿತ್ತಿ ಕಟಾವು ಮಾಡಿದ ರೈತರು ಮಾರುಕಟ್ಟೆಯಲ್ಲಿ  ದಿಢೀರ್‌ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಸರ್ಕಾರದಿಂದ ಹೆಸರು ಖರೀದಿಸುವ ಬೆಂಬಲ ಬೆಲೆ ಖರೀದಿ ಕೇಂದ್ರದ ನಿರೀಕ್ಷೆಯಲ್ಲಿರುವ ತಾಲೂಕಿನ ರೈತರು ಬೆಳೆದ ಫಸಲು ಕಾಯ್ದಿಟ್ಟುಕೊಂಡು ಕುಳಿತಿದ್ದಾರೆ. ಬೆಲೆ ಕುಸಿತ: ಈಗಾಗಲೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಹೆಸರು ಧಾನ್ಯ ಖರೀದಿಗೆ 6975 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದು, ರೈತರಿಗೆ ಆಶಾದಾಯಕವಾಗಿದೆ. ಮತ್ತೂಂದೆಡೆ ಪ್ರಾರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ಮಾರುಕಟ್ಟೆಯಲ್ಲಿ 5800 ರೂ. ಇದ್ದ ದರ ಇದೀಗ 4800 ರೂ.ಗೆ ಕುಸಿದಿದೆ.

Advertisement

ಇದರಿಂದಾಗಿ ಅತಿ ಕಡಿಮೆ ಬೆಲೆಗೆ ದಾಸ್ತಾನು ಮಾರಾಟ ಮಾಡಲು ರೈತರು ಚಿಂತೆಗೀಡು ಆಗಿದ್ದಾರೆ. ಮೇಲಾಗಿ ಬಿತ್ತನೆ ಸಂದರ್ಭದಲ್ಲಿ ಉತ್ತಮವಾಗಿ ಸುರಿದ ಮಳೆರಾಯ ಹೆಸರು ಬೆಳೆ ಬೆಳವಣಿಗೆಯಾದ ನಂತರ ಕೈಕೊಟ್ಟಿದ್ದರಿಂದಬಹಳಷ್ಟು ಹಾಳಾಗಿದೆ. ಅಳಿದುಳಿದ ಫಸಲಿಗೆ ಉತ್ತಮ ಬೆಲೆ ಸಿಗಲಿ ಎಂಬ ರೈತರ ಮಹದಾಸೆಗೆ ಖರೀದಿ ಕೇಂದ್ರ ಆಶಾದಾಯಕವಾಗಿದೆ. 13 ಸಾವಿರ ಹೆಕ್ಟೇರ್‌: ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ಇಟ್ಟುಕೊಂಡಿದ್ದ 7 ಸಾವಿರ ಹೆಕ್ಟೇರ್‌ ಗುರಿ ಮೀರಿ ಈ ಬಾರಿ ತಾಲೂಕಿನಲ್ಲಿ ಅತ್ಯಧಿಕ 13 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಕೆಲವೆಡೆ ಮಳೆ ಕೈಹಿಡಿದ ಪರಿಣಾಮ ಕೆಲವು ರೈತರು ಉತ್ತಮ ಫಸಲು ತೆಗೆದಿದ್ದಾರೆ.

ವಾರದೊಳಗೆ ನಿರೀಕ್ಷೆ: ಆ.29ರಂದು ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇನ್ನು ರಾಜ್ಯ ಸರ್ಕಾರದ ಆದೇಶ ಮಾತ್ರ ಬಾಕಿಯಿದ್ದು, 2,3 ದಿನದೊಳಗೆ ರಾಜ್ಯ ಸರ್ಕಾರ ಆದೇಶ ಹೊರಡಿಸುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ನಿರೀಕ್ಷೆ ಹೊತ್ತ ರೈತರಿಗೆ ಹೆಸರು ಖರೀದಿ ಕೇಂದ್ರ ಕೈಗೆಟುಕುವ ಸಾಧ್ಯತೆ ಸಮೀಪಿಸಿದೆ. ಕಳೆದ ತಿಂಗಳಿನಿಂದಲೇ ಕಟಾವು ಪ್ರಾರಂಭಿಸಿದ ತಾಲೂಕಿನ ರೈತರು ಹೆಸರು ರಾಶಿ ಮಾಡಿ ಧಾನ್ಯವನ್ನು ಬಿಸಿಲಿನಲ್ಲಿ ಒಣಗಿ ಹಾಕಿ ಮಾರಾಟಕ್ಕೆ ಕಾಯ್ದು ಕುಳಿತಿದ್ದಾರೆ. ಇನ್ನೊಂದೆಡೆ ಆಗಾಗ ತುಂತುರು ಮಳೆ ಬೀಳುತ್ತಿದ್ದರಿಂದ ಹೆಸರು ಧಾನ್ಯ ರಕ್ಷಿಸಿಕೊಳ್ಳುವುದು ರೈತರಿಗೆ ಪ್ರಯಾಸವಾಗಿದೆ. ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡಲಿ ಎಂಬುದು ತಾಲೂಕಿನ ರೈತರ ಕೋರಿಕೆಯಾಗಿದೆ.

ರಾಜ್ಯ ಸರ್ಕಾರದ ಆದೇಶ
ಗದಗ:
ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಗದಗ, ಧಾರವಾಡ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮತ್ತು ಬೀದರ ಜಿಲ್ಲೆಗಳ ರೈತರಿಂದ ಆ. 30ರಿಂದ 30 ದಿನಗಳ ಅವ ಧಿಯವರೆಗೆ ಎಫ್‌ಎಕ್ಯೂ ಗುಣಮಟ್ಟದ ಹೆಸರನ್ನು ಕೇಂದ್ರ ಸರ್ಕಾರ ಘೋಷಿಸಿರುವ ಪ್ರತಿ ಕ್ವಿಂಟಲ್‌ಗೆ 6,975 ರೂ. ದರದಲ್ಲಿ ಮಾರ್ಗಸೂಚಿಗಳನ್ವಯ ಖರೀದಿಸಲು ರಾಜ್ಯ ಮಟ್ಟದ ಎಜೆನ್ಸಿಯಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಂಡಳವನ್ನು ನಿಯಮಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಖರೀದಿ ಷರತ್ತುಗಳು: ಕೇಂದ್ರ ಸರ್ಕಾರ ಅನುಮತಿಸಿರುವ ಗರಿಷ್ಠ 23,250 ಮೆಟ್ರಿಕ್‌ ಟನ್‌ಗೆ ಹೆಸರು ಖರೀದಿ ಮಿತಿಗೊಳಿಸಲಾಗಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್‌ನಂತೆ ಗರಿಷ್ಠ 10 ಕ್ವಿಂಟಲ್‌ ಹೆಸರನ್ನು ಮಾತ್ರ ಖರೀದಿಸಲಾಗುತ್ತದೆ.

ಸಿದ್ಧಲಿಂಗಯ್ಯ ಮಣ್ಣೂರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next