Advertisement

130 ಚೀಲ ನಕಲಿ ರಸಗೊಬ್ಬರ ಸರಬರಾಜು: ದೂರು ದಾಖಲು

02:30 PM May 11, 2022 | Team Udayavani |

ಯಾದಗಿರಿ: ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದ ಏಜೆನ್ಸಿಯೊಂದಕ್ಕೆ ನಕಲಿ ರಸಗೊಬ್ಬರ ಸರಬರಾಜು ಮಾಡಲಾಗಿದ್ದು, ಏಜೆನ್ಸಿಯ ಮಾಲೀಕ ರಸಗೊಬ್ಬರ ಪರೀಕ್ಷಿಸಿದಾಗ ನಕಲಿ ರಸಗೊಬ್ಬರ ಎಂಬುದು ಗೊತ್ತಾಗಿ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಮಹ್ಮದ್‌ ಹುಸೇನ್‌ ಹಾಗೂ ಖಾಜಾ ಹುಸೇನಿ ಅವರು ಕೋನಹಳ್ಳಿ ಗ್ರಾಮದಲ್ಲಿ ನೂತನವಾಗಿ ಕೆಬಿಎನ್‌ ಆಗ್ರೋ ಏಜೆನ್ಸಿ ಪ್ರಾರಂಭಿಸಿದ್ದಾರೆ. ಇನ್ನೇನು ಕೃಷಿ ಚಟುವಟಿಕೆಗಳು ಪ್ರಾರಂಭವಾಗುತ್ತವೆ ಎನ್ನುವ ನಿಟ್ಟಿನಲ್ಲಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಸಾಬಣ್ಣ ನಾಗನಟಗಿ ಎನ್ನುವ ಮಧ್ಯವರ್ತಿಗೆ ಭೇಟಿ ಮಾಡಿ ಮಂಗಳ ಡಿಎಪಿ ರಸಗೊಬ್ಬರವನ್ನು ಕಳುಹಿಸಲು ಬೇಡಿಕೆ ಕೊಟ್ಟಿದ್ದಾರೆ.

ಅಲ್ಲದೆ 2 ಲಕ್ಷ ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಿದ್ದಾರೆ. ಅದರಂತೆ ಮೇ 7ರಂದು ಮಧ್ಯವರ್ತಿ ಎರಡು ಬೊಲೆರೋ ಗೂಡ್ಸ್‌ ವಾಹನಗಳ ಮುಖಾಂತರ 130 ಚೀಲ ರಸಗೊಬ್ಬರ ಕಳುಹಿಸಿದ್ದಾನೆ.

ಆಗ ಪರೀಕ್ಷಿಸಿದಾಗ ಚೀಲಗಳು ಸಂಪೂರ್ಣವಾಗಿ ಮಂಗಳ ಡಿಎಪಿಯಂತೆಯೇ ಗೋಚರಿಸಿವೆ. ಆದರೆ ಕೆಳಗಡೆ ಬಿದ್ದ ರಸಗೊಬ್ಬರ ನೋಡಿದಾಗ ನಕಲಿ ಗೊಬ್ಬರ ಎಂಬುದು ಗೊತ್ತಾಗಿ ವಾಹನಗಳನ್ನು ಪೊಲೀಸ್‌ ಠಾಣೆಗೆ ಕಳುಹಿಸಿದ್ದಾರೆ. ಈ ಕುರಿತು ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next