ಕೋಲಾರ: ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಒತ್ತುವರಿದಾರರ ವಶದಲ್ಲಿದ್ದ ಸರ್ಕಾರಿ ಶಾಲೆಯ ಜಾಗ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರ ಕಟ್ಟುನಿಟ್ಟಿನ ಆದೇಶ ಹಾಗೂ ಡಿಡಿಪಿಐ ಕೆ.ರತ್ನಯ್ಯ ಅವರ ಸತತ ಪ್ರಯತ್ನದಿಂದಾಗಿ ಮತ್ತೆ ಶಿಕ್ಷಣ ಇಲಾಖೆಯ ಕೈಸೇರಿದೆ.
ತಾಲೂಕಿನ ತಲಗುಂದದಲ್ಲಿನ 34 ಗುಂಟೆ ಜಾಗ ಹಾಗೂ ಸರ್ವಶಿಕ್ಷಣ ಅಭಿಯಾನದಡಿ ಕಟ್ಟಲಾದ ಕಟ್ಟಡವನ್ನು ಒತ್ತುವರಿದಾರರಿಂದ ಬಿಡಿಸಿಕೊಂಡಿದ್ದು, ತಹಶೀಲ್ದಾರ್ ಸೂಚನೆಯಂತೆ ಆರ್.ಐ ಮಂಜುನಾಥ್ ಶನಿವಾರ ಕಟ್ಟಡದ ಕೀ ಅನ್ನು ಬಿಇಒ ನಾಗರಾಜಗೌಡರಿಗೆ ಹಸ್ತಾಂತರಿಸಿದರು.
ಸುಪ್ರೀಂ ಕೋರ್ಟ್‌ವರೆಗೂ ಸಾಗಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯ ಶಾಲೆಯ ಪರ ತೀರ್ಪು ನೀಡಿರುವುದು ಮತ್ತು ಜಿಲ್ಲಾಧಿಕಾರಿಯವರ ಕಟ್ಟಪ್ಪಣೆಯಂತೆ ಒತ್ತುವರಿ ತೆರವುಗೊಳಿಸಿರುವುದು, ಇತರೆ ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತಿದೆ.
ಭೂ ವಿವಾದಕ್ಕೆ ಕಾರಣ: ಕೋಲಾರ ತಾಲೂಕಿನ ತಲಗುಂದ ಗ್ರಾಮದ ಸರ್ವೇ ನಂ.164ರಲ್ಲಿನ 34 ಗುಂಟೆ ಜಮೀನನ್ನು ಸರ್ಕಾರಿ ಶಾಲೆಗೆ ಕಳೆದ 15 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದು, ಅದರಂತೆ ಅಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ, ಗ್ರಾಮದ ಶೇಕ್ ಫೈಜುವುಲ್ಲಾ ಬಿನ್ ಹೈದರ್ ಸಾಬ್ ಅವರು ಜಾಗವನ್ನು ಅತಿಕ್ರಮಿಸಿ ಇದು ನಮಗೆ ಸೇರುತ್ತದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ನಡುವೆ ಸತತ 13 ವರ್ಷಗಳ ಕಾಲ ವಿವಿಧ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದು, ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೂ ಏರಿತ್ತು. ಇತ್ತೀಚೆಗೆ ಸುಪ್ರೀಮ್‌ಕೋರ್ಟ್ ತೀರ್ಪು ನೀಡಿ ಈ ಜಾಗ ಸರ್ಕಾರಿ ಶಾಲೆಗೆ ಸೇರಿದೆ ಎಂದು ಹೇಳುವ ಮೂಲಕ ನಿರಂತರ 13 ಹೋರಾಟದಲ್ಲಿ ಶಿಕ್ಷಣ ಇಲಾಖೆಗೆ ಜಯವಾಯಿತು.
ತೀರ್ಪುಬಂದೊಡನೆ ಡಿ.ಸಿ.ಗೆ ಮನವಿ: ತೀರ್ಪು ಬರುತ್ತಿದ್ದಂತೆ ಡಿಡಿಪಿಐ ಕೆ.ರತ್ನಯ್ಯ ಈ ಸಂಬಂಧ ತೀರ್ಪಿನ ಪ್ರತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜಾಗವನ್ನು ಶಿಕ್ಷಣ ಇಲಾಖೆ ವಶಕ್ಕೆ ನೀಡಲು ಮನವಿ ಮಾಡಿದ್ದರು. ಮನವಿ ನೀಡಿದ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ರಿಗೆ ನಿರ್ದೇಶನ ನೀಡಿ ಶಾಲೆ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಕಟ್ಟಪ್ಪಣೆ ನೀಡಿದರು.
ಅದರಂತೆ ತಹಶೀಲ್ದಾರ್ ಸೂಚನೆಯಂತೆ ಕಂದಾಯ ನಿರೀಕ್ಷಕ ಮಂಜುನಾಥ್ ಶನಿವಾರ ಗ್ರಾಮಸ್ಥರ ಸಮ್ಮುಖದಲ್ಲಿ ಕಟ್ಟಡ ತೆರವುಗೊಳಿಸಿ ಒತ್ತುವರಿದಾರ ಷೇಕ್ ಫೈಜಾವುಲ್ಲಾರಿಂದ ಬೀಗದ ಕೈಯನ್ನು ಪಡೆದುಕೊಂಡು ಬಿಇಒ ಕೆ.ಎಸ್.ನಾಗರಾಜಗೌಡರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ನಿರೀಕ್ಷಕ ಮಂಜುನಾಥ್, ಈ ಜಾಗವನ್ನು ಕೂಡಲೇ ಸರ್ವೇ ಮಾಡಿಸಿ ಚೆಕ್‌ಬಂದಿ ಹಾಕಿ ಶಿಕ್ಷಣ ಇಲಾಖೆಗೆ ನೀಡುವುದಾಗಿ ತಿಳಿಸಿದರು.
ನಾಗರಾಜಗೌಡ ಕೀ ಪಡೆದುಕೊಂಡು, ಜ್ಞಾನದೇಗುಲಗಳಾದ ಶಾಲೆಗಳಿಗೆ ಹೆಚ್ಚಿನ ನೆರವು ನೀಡಿ, ಈ ದೇಗುಲಗಳ ಜಾಗದ ಮೇಲೆ ಕಣ್ಣು ಹಾಕದಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಶಿವಕುಮಾರ್, ಸದಸ್ಯರಾದ ಉಮಾ, ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಶ್ರೀರಾಮಪ್ಪ, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್, ಸಿಆರ್‌ಪಿ ಗೋವಿಂದ್, ಅಂಗವಿಕಲ ಮಕ್ಕಳ ಸಂಘದ ರಾಜೇಶ್, ಶಂಕರಪ್ಪ, ಸವಿತಮ್ಮ ಜಗದೀಶ್, ಶಬಿನಾ,ಶಿವಪ್ಪ, ಟಿ.ಎಸ್.ಸುರೇಶ್, ಉಲ್ಲೂರಪ್ಪ, ತಬರ್ ಪಾಷ, ಟಿ.ಆರ್.ವೆಂಕಟರೆಡ್ಡಿ, ಶಾಶಲಾ ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಶಿಕ್ಷಕರು ಹಾಜರಿದ್ದರು.