Advertisement

13 ಶಾಲೆಗಳು ಇ-ಸ್ಮಾರ್ಟ್‌ ಆಗಿ ಮೇಲ್ದರ್ಜೆಗೆ

06:03 PM Dec 18, 2019 | mahesh |

ಮಹಾನಗರ: ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾದ ಪಾಲಿಕೆಯ ಎಂಟು ವಾರ್ಡ್‌ಗಳ 13 ಶಾಲೆಗಳು ಮುಂದಿನ ದಿನಗಳಲ್ಲಿ ಇ-ಸ್ಮಾರ್ಟ್‌ ಶಾಲೆಗಳಾಗಿ ಮೇಲ್ದರ್ಜೆಗೇರಲಿವೆ. ಎಡಿಬಿ ಯೋಜನೆಯಡಿ 16 ಕೋಟಿ ರೂ. ವೆಚ್ಚದಲ್ಲಿ ಈ ಶಾಲೆಗಳು ಅಗತ್ಯ ಮೂಲಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

Advertisement

ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಅವಶ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಉದ್ದೇಶದಿಂದ 13 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾದ ಎಂಟು ವಾರ್ಡ್‌ ಗಳ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಹಂತಹಂತವಾಗಿ ಮೇಲ್ದರ್ಜೆಗೇರಲಿವೆ. ಮೊದಲ ಹಂತದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳಿಗೆ ಪೂರಕ ಸೌಲಭ್ಯ ಒದಗಿಸಿಕೊಡುವ ಕೆಲಸವಾಗಲಿದೆ.

ವಾರ್ಡ್‌ ನಂ. 45ರ ಸಹಿಪ್ರಾ ಶಾಲೆ ನಿರೇಶ್ಯಾಲ್ಯ (32.1 ಲಕ್ಷ ರೂ.) ಸಹಿಪ್ರಾ ಶಾಲೆ ಬಸ್ತಿಗಾರ್ಡನ್‌ (56.4 ಲಕ್ಷ ರೂ.), ವಾರ್ಡ್‌ ನಂ. 57ರ ಸಹಿಪ್ರಾ ಶಾಲೆ ಹೊಗೆ ಬಜಾರ್‌ (50 ಲಕ್ಷ ರೂ.), ಸರಕಾರಿ ಪ್ರೌಢಶಾಲೆ ಹೊಗೆಬಜಾರ್‌ (61.8 ಲಕ್ಷ ರೂ.), ವಾರ್ಡ್‌ ನಂ. 46ರ ಸಹಿಪ್ರಾ ಶಾಲೆ ಪಾಂಡೇಶ್ವರ (104 ಲಕ್ಷ ರೂ.), ವಾರ್ಡ್‌ ನಂ. 44ರ ಸಹಿಪ್ರಾ ಶಾಲೆ ಬಂದರು (ಉರ್ದು) ಮತ್ತು ಸರಕಾರಿ ಪ್ರೌಢಶಾಲೆ ಬಂದರು-ಉರ್ದು (ಎರಡು ಶಾಲೆಗಳಿಗೆ ಒಟ್ಟು 98.4 ಲಕ್ಷ ರೂ.), ವಾರ್ಡ್‌ ನಂ. 40ರ ಸಹಿಪ್ರಾ ಶಾಲೆ ಬಲ್ಮಠ, ಸರಕಾರಿ ಪ್ರೌಢಶಾಲೆ, ಸರಕಾರಿ ಪಪೂ ಕಾಲೇಜು ಬಲ್ಮಠ (ಎರಡು ಶಾಲೆಗಳಿಗೆ ಒಟ್ಟು 190 ಲಕ್ಷ ರೂ.), ವಾರ್ಡ್‌ 58ರ ಸ.ಹಿ.ಪ್ರಾ. ಶಾಲೆ ಕನ್ನಡ ಬೋಳಾರ, ಸಹಿಪ್ರಾ ಶಾಲೆ ಪಶ್ಚಿಮ ಉರ್ದು ಬೋಳಾರ (ಎರಡು ಶಾಲೆಗಳಿಗೆ ಒಟ್ಟು 166.27 ಲಕ್ಷ ರೂ.), ವಾರ್ಡ್‌ ನಂ. 46ರ ಸರಕಾರಿ ಅಭ್ಯಾಸಿ ಪ್ರೌಢಶಾಲೆ ಹಂಪನಕಟ್ಟೆ (113 ಲಕ್ಷ ರೂ.), ಸರಕಾರಿ ಪ್ರೌಢಶಾಲೆ ರಥಬೀದಿ (108.88 ಲಕ್ಷ ರೂ.) ಶಾಲೆಗಳು ಮೇಲ್ದರ್ಜೆಗೇರಲಿವೆ.

ಏನೇನು ಸವಲತ್ತು?
ಈ ಮೊತ್ತದಲ್ಲಿ ಮುಖ್ಯವಾಗಿ ಶಾಲೆಯ ಕಟ್ಟಡ ದುರಸ್ತಿ, ಛಾವಣಿ ಹಾಕುವುದು/ ನೆಲ ಹಾಸುವುದು, ಕಾಂಪೌಂಡ್‌ ನಿರ್ಮಾಣ, ಶೌಚಾಲಯ ದುರಸ್ತಿ, ನಿರ್ಮಾಣ, ಪ್ಲಂಬಿಂಗ್‌ ಕೆಲಸ, ವಿದ್ಯುತ್ಛಕ್ತಿ, ಕ್ರೀಡಾ ಸೌಲಭ್ಯ ಒದಗಿಸುವುದು ಸಹಿತ ಶಾಲೆಯಲ್ಲಿ ಇಲ್ಲದೆ ಇರುವ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ನಾದುರಸ್ತಿಯಲ್ಲಿರುವ ಸೌಲಭ್ಯಗಳನ್ನು ನವೀಕರಣಗೊಳಿಸುವ ಕೆಲಸವೂ ನಡೆಯಲಿದೆ.

5 ಕೋಟಿ ರೂ.ಗಳಲ್ಲಿ ವಿವಿಧ ಸೌಲಭ್ಯ
ಎಲ್ಲ ಶಾಲೆಗಳಲ್ಲಿಯೂ ಗುಣಮಟ್ಟದ ಸೌಲಭ್ಯ ಅಳವಡಿಕೆಗೆ ಒತ್ತು ನೀಡಲಾಗಿದ್ದು, ಇದಕ್ಕಾಗಿ 5 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. 67.90 ಲಕ್ಷ ರೂ. ವೆಚ್ಚದಲ್ಲಿ ಕನ್ನಡ ಸಾಫ್ಟ್‌ವೇರ್‌ ಇರುವ 35 ಕಂಪ್ಯೂಟರ್‌ ಘಟಕ, 1.75 ಲಕ್ಷ ರೂ. ವೆಚ್ಚದಲ್ಲಿ 35 ಒಳ ಸಿರಾಮಿಕ್‌ ಬೋರ್ಡ್‌, 9.8 ಲಕ್ಷ ರೂ. ವೆಚ್ಚದಲ್ಲಿ 392 ಮ್ಯಾನೇಜ್‌ಮೆಂಟ್‌ ಕನ್ಸೋಲ್‌ ಸಾಫ್ಟ್‌ವೇರ್‌, 97.92 ಲಕ್ಷ ರೂ. ವೆಚ್ಚದಲ್ಲಿ 392 ನೆಟ್‌ ಬುಕ್‌ (ಲ್ಯಾಪ್‌ಟಾಪ್‌), 7 ಲಕ್ಷ ರೂ. ವೆಚ್ಚದಲ್ಲಿ ಲ್ಯಾಪ್‌ಟಾಪ್‌ಗಾಗಿ 35 ವೈರ್‌ಲೆಸ್‌ ಸಾರ್ಟ್‌ ಮುಂತಾದ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. 18 ಲಕ್ಷ ರೂ. ವೆಚ್ಚದ ಚಾರ್ಜಿಂಗ್‌ ಕಾಸ್ಟ್‌, 83 ಲಕ್ಷ ರೂ. ಮೂಲ ಸೌಕರ್ಯ, ವಿದ್ಯುತ್‌ ಕೆಲಸ, ತರಬೇತದಾರರ ವೆಚ್ಚಕ್ಕಾಗಿ ಖರ್ಚಾಗಲಿದೆ. ಪ್ರಸ್ತುತ ಈ ಕಾಮಗಾರಿಯು ಟೆಂಡರ್‌ ಪ್ರಕ್ರಿಯೆಯಲ್ಲಿದೆ ಎಂದು ಶಾಸಕರು ತಿಳಿಸಿದ್ದಾರೆ.

Advertisement

13 ಶಾಲೆ ಮೇಲ್ದರ್ಜೆಗೆ
ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆಯಾದ ಎಂಟು ವಾರ್ಡ್‌ ಗಳ 13 ಶಾಲೆಗಳನ್ನು ಎಡಿಬಿ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುವುದು. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಉನ್ನತ ದರ್ಜೆಯ ಸೌಕರ್ಯಗಳನ್ನು ಕಲ್ಪಿಸಿ ಕೊಡುವ ಉದ್ದೇಶದಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 16 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಎರಡು ಹಂತದಲ್ಲಿ ನಡೆಯಲಿದೆ.
– ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next