Advertisement

ಏ.13ಕ್ಕೆ ನಂಜುಂಡೇಶ್ವರನ ಪ್ರಸಾದ ಯಾರಿಗೆ?

12:58 PM Apr 11, 2017 | Team Udayavani |

ಮೈಸೂರು: ರಾಜಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ನಂಜನಗೂಡು ಉಪ ಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭ ದ್ರವಾಗಿದ್ದು, ಮತ ಎಣಿಕೆ ನಡೆಯುವ ಏ.13 ರಂದು ಯಾರಿಗೆ ನಂಜುಂಡೇಶ್ವರನ ಪ್ರಸಾದ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ನಂಜನಗೂಡಿನ ದೇವೀರಮ್ಮನ ಹಳ್ಳಿ ಗೇಟ್‌ ಬಳಿ ಇರುವ ಜೆಎಸ್‌ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಏ.13ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫ‌ಲಿತಾಂಶ ಹೊರಬೀಳಲಿದೆ.

Advertisement

ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಮತ ಚಲಾವಣೆಯಾದ ಮತಯಂತ್ರಗಳು ಹಾಗೂ ವಿವಿ ಪ್ಯಾಟ್‌ಗಳನ್ನು ಅಭ್ಯರ್ಥಿ, ಅಭ್ಯರ್ಥಿ ಪರ ಏಜೆಂಟರು, ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಭಾನುವಾರ ರಾತ್ರಿ 11.55 ಗಂಟೆಗೆ ಭದ್ರತಾ ಕೊಠಡಿ ಯಲ್ಲಿ ಇರಿಸಲಾಗಿದ್ದು, ಭದ್ರತಾ ಕೊಠಡಿಗೆ 24 ಗಂಟೆಗಳ ಕಾಲ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು, ಕೇಂದ್ರೀಯ ಅರೆ ಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಕಾಲೇಜಿನ ಹೊರ ಭಾಗದಲ್ಲಿ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ.

ಶೇ. 77.45 ಮತದಾನ 101930 ಪುರುಷ ಹಾಗೂ 99879 ಮಹಿಳಾ ಮತದಾರರು ಸೇರಿದಂತೆ ಕ್ಷೇತ್ರದ ಒಟ್ಟು 201818 ಮತದಾರರ ಪೈಕಿ, 156315 ಮತದಾರರು ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ.77.45 ಮತದಾನವಾಗಿದೆ. ನಂಜನಗೂಡು ಪಟ್ಟಣದ 24ನೇ ವಾರ್ಡ್‌ ಮತಗಟ್ಟೆ ಸಂಖ್ಯೆ 51ರಲ್ಲಿ ಅತಿ ಕಡಿಮೆ (ಶೇ.47.51) ಮತದಾನವಾಗಿದ್ದು, ಕಾಳೀಹುಂಡಿಯ ಮತಗಟ್ಟೆ ಸಂಖ್ಯೆ 144ರಲ್ಲಿ ಅತಿ ಹೆಚ್ಚಿನ (ಶೇ.95.53) ಮತದಾನವಾಗಿದೆ.

ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಬಳಸಿ 1,24,163 ಮಂದಿ ಮತದಾನ ಮಾಡಿದ್ದರೆ, ಉಳಿದವರು ಇತರೆ ಗುರುತಿನ ಚೀಟಿಗಳನ್ನು ಬಳಸಿ ಮತ ಚಲಾಯಿಸಿದ್ದಾರೆ. 236 ಮತಗಟ್ಟೆಗಳನ್ನು ಹೊಂದಿರುವ ನಂಜನ ಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಯಾವುದೇ ತಾಂತ್ರಿಕ ತೊಂದರೆ ಕಾಣಿಸಿ ಕೊಂಡರೂ ತಕ್ಷಣ ಬದಲೀ ವ್ಯವಸ್ಥೆ ಮಾಡುವ ಸಲುವಾಗಿ ಹೆಚ್ಚುವರಿ ಯಂತ್ರಗಳನ್ನು ತರಿಸಿ ಕಾದಿರಿಸಿ ಕೊಳ್ಳಲಾಗಿತ್ತು, 354 ಬ್ಯಾಲೆಟ್‌ ಯೂನಿಟ್‌, 307 ಕಂಟ್ರೋಲ್‌, ಯೂನಿಟ್‌ ಹಾಗೂ 366 ವಿವಿ ಪ್ಯಾಟ್‌ಗಳನ್ನು ತರಿಸಲಾಗಿತ್ತು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಿ.ರಂದೀಪ್‌ ತಿಳಿಸಿದ್ದಾರೆ.

ಈ ಪೈಕಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ 2 ಬ್ಯಾಲೆಟ್‌ ಯೂನಿಟ್‌, 2 ಕಂಟ್ರೋಲ್‌ ಯೂನಿಟ್‌ ಹಾಗೂ 13 ವಿವಿ ಪ್ಯಾಟ್‌ಗಳನ್ನು ಬದಲಾಯಿಸ ಲಾಯಿತು ಎಂದು ಹೇಳಿದ್ದಾರೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಸೇರಿದಂತೆ 2223 ಪೊಲೀಸರನ್ನು ಚುನಾವಣಾ ಭದ್ರತೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.

Advertisement

ಪ್ರಕರಣ: ಚುನಾವಣೆ ಪ್ರಕ್ರಿಯೆ ಆರಂಭವಾದ ದಿನದಿಂದ ಈವರೆಗೆ 77.33 ಲಕ್ಷ ರೂ. ನಗದು ವಶಪಡಿಸಿ ಕೊಂಡಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 107 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಬಕಾರಿ ಕಾಯ್ದೆ ಉಲ್ಲಂಘನೆ ಸಂಬಂಧ 72 ಪ್ರಕರಣ ದಾಖಲಾಗಿದ್ದು, 85,930 ರೂ. ಮೌಲ್ಯದ 249.77 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ 465 ಜನರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದ್ದು, 628 ಜನರ ವಿರುದ್ಧ ಸಿಆರ್‌ಪಿಸಿಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next