ನವದೆಹಲಿ: ದಕ್ಷಿಣದ ಅಮೆರಿಕಾದ ಈಕ್ವೆಡಾರ್ ಮತ್ತು ಉತ್ತರ ಪೆರುವಿನ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 13 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ( ಮಾ.18 ರಂದು) ನಡೆದಿರುವುದು ವರದಿಯಾಗಿದೆ.
ಶನಿವಾರ ಮಧ್ಯಾಹ್ನದ ವೇಳೆ ದಕ್ಷಿಣದ ಅಮೆರಿಕಾದ ಈಕ್ವೆಡಾರ್ ಮತ್ತು ಉತ್ತರ ಪೆರುವಿನ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ ಪರಿಣಾಮ ಕೆಲ ಮನೆಗಳು, ಶಾಲಾ ಕಟ್ಟಡಗಳು, ವೈದ್ಯಕೀಯ ಕೇಂದ್ರಗಳು ಕುಸಿದಿದ್ದು, ಹತ್ತಾರು ವಾಹನಗಳಿಗೆ ಹಾನಿಯಾಗಿದೆ.
ಈಕ್ವೆಡಾರ್‌ನ ಮಚಲಾ ಮತ್ತು ಕ್ಯುಂಕಾದಂತಹ ನಗರದಲ್ಲಿ ಅನೇಕ ಹಾನಿಗಳು ಸಂಭವಿಸಿದೆ. ಭೂಕಂಪನದ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾದ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ ಸುಮಾರು 10 ಕಿಲೋಮೀಟರ್ (6.2 ಮೈಲುಗಳು) 66.4 ಕಿಮೀ (41.3 ಮೈಲುಗಳು) ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಹೇಳಿದೆ.
ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಹಾನಿಗೆ ಒಳಗಾದವರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲಾಗುತ್ತದೆ. ರಕ್ಷಣೆಗೆ ಅಗತ್ಯವಾದ ಸೌಕರ್ಯವನ್ನು ರಕ್ಷಣಾ ಸಿಬ್ಬಂದಿಗೆ ನೀಡಲಾಗುವುದೆಂದು ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರು ಟ್ವೀಟ್ ಮಾಡಿ ಹೇಳಿದ್ದಾರೆ.
ಇತ್ತ ಉತ್ತರ ಪೆರುವಿನಲ್ಲೂ ಭೂಮಿ ಕಂಪಿಸಿದ್ದು, ಸದ್ಯ ಅಲ್ಲಿ ಹೆಚ್ಚಿನ ಹಾನಿ, ಅಪಾಯ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.