ಬೆಂಗಳೂರು: ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಬಿಟ್ ಕಾಯಿನ್ ವಂಚನೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮತ್ತೂಂದು ಬಿಟ್‌ಕಾಯಿನ್ ಮೂಲಕ 13 ಲಕ್ಷ ರೂ. ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಗೊಟ್ಟಿಗೆರೆ ನಿವಾಸಿ ಈರಪ್ಪ ನಾಯ್ಕ (31) ಹಣ ಕಳೆದುಕೊಂಡವರು. ಈ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತನೊಬ್ಬ ಈರಪ್ಪ ನಾಯ್ಕ ಅವರ ಮೊಬೈಲ್ ನಂಬರ್ ಅನ್ನು ಅ.11 ರಂದು ಬಿಟ್‌ಕಾಯಿನ್‌ಗೆ ಸಂಬಂಧಿಸಿದ “00202ಎನೆಕ್ಸ್ ಬಿಟಿಸಿ ಫರ್‌ಟ್ಯೂನ್019′ ವಾಟ್ಸ್‌ಆ್ಯಪ್ ಗ್ರೂಪ್ ಗೆ ಸೇರಿಸಿದ್ದಾನೆ. ಆ ಗ್ರೂಪ್ ಮೂಲಕ ಅನಲಿಸ್ಟಾ ವೆನೆಸ್ಸಾ ಎಂಬುವರು ಪರಿಚಯವಾಗಿ ಬಿಟ್ ಕಾಯಿನ್ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಪರಿಚಯಿಸಿದ್ದು, ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ನಿರ್ಬಂಧ ಎಲ್ಲರಿಗೂ ಅನ್ವಯ, ಉಲ್ಲಂಘಿಸಿದರೆ ಕಾನೂನು ಕ್ರಮ: ಸಚಿವ ಆರಗ ಜ್ಞಾನೇಂದ್ರ
ಅಲ್ಲದೆ, ವೆನೆಸ್ಸಾ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂದು ಹೇಳಿ ನಂಬಿಸಿದ್ದಾರೆ. ಮೊದಲ ಹಂತದಲ್ಲಿ ಈರಪ್ಪನ ನಾಯ್ಕ ಅವರಿಂದ 3,04,263 ರೂ. ಹೂಡಿಕೆ ಮಾಡಿಸಿದ್ದಾರೆ. ನೀವು ಹೂಡಿಕೆ ಮಾಡಿರುವ ಹಣದಿಂದ ನಿಮಗೆ ಅಧಿಕ ಲಾಭ ಬಂದಿದೆ. ಆ ಹಣವನ್ನು ನೀವು ವಾಪಸ್ ಪಡೆಯಲು ಹಲವಾರು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿ ಈರಪ್ಪ ನಾಯ್ಕ ಅವರ ಬ್ಯಾಂಕ್ ಖಾತೆಯಿಂದ ಹಂತ -ಹಂತವಾಗಿ 13,62,817 ರೂ. ವರ್ಗಾವಣೆ ಮಾಡಿಕೊಂಡು ಲಾಭದ ಹಣವನ್ನು ಹಾಗೂ ಅಸಲು ಹಣವನ್ನು ಕೊಡದೆ ವಂಚಿಸಿದ್ದಾರೆ ಎಂದು ಈರಪ್ಪ ನಾಯ್ಕ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಆದರೆ, ತನಿಖೆ ವೇಳೆ ಆ ಅಪರಿಚಿತ ನಂಬರ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.